ಬೆಂಗಳೂರು: ಪ್ರಣಾಳಿಕೆ ಮತ್ತು ಬಜೆಟ್ ನಲ್ಲಿ ಭರವಸೆ ನೀಡಿದಂತೆ ಸರಕಾರಿ ನೌಕರರಿಗೆ ಒಪಿಎಸ್ ಕೊಡಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ರಾಜ್ಯ ಕಾಂಗ್ರೆಸ್ ಸರಕಾರ ಹಳೆ ಪಿಂಚಣಿ ಯೋಜನೆ (OPS) ತನ್ನ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ವರ್ತಿಸಿ ಸರಕಾರಿ ನೌಕರರಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಸುಪ್ರಿಂ ಕೋರ್ಟ್ ಆದೇಶವನ್ನು ಕೇಂದ್ರ ಸರಕಾರ ಈಗಾಗಲೇ ಪಾಲಿಸಿದೆ. ಈ ಒತ್ತಡಕ್ಕೆ ಸಿಲುಕಿದ ರಾಜ್ಯ ಸರಕಾರ ಹಳೆ ಪಿಂಚಣಿ ಯೋಜನೆ ಬಗ್ಗೆ ಅರೆಬರೆ, ತರಾತುರಿ ಆದೇಶ ಹೊರಡಿಸಿದೆಯೇ ಹೊರತು, ಸರಕಾರಿ ನೌಕರರ ಮೇಲೆ ಪ್ರೀತಿಯಿಂದಲ್ಲ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರಕಾರವು 1-4-2006ಕ್ಕೂ ಮೊದಲು ಅಧಿಸೂಚನೆಯಾಗಿ ನೇಮಕಗೊಂಡವರಿಗೆ OPS ಕೊಟ್ಟಿದೆ. ನಂತರ ಎಲ್ಲಾ ರಾಜ್ಯಗಳು ಈ ಆದೇಶ ಜಾರಿ ಮಾಡುತ್ತಿವೆ ಅದರಂತೆ ಕರ್ನಾಟಕದಲ್ಲೂ ಆಗಿದೆ ಅಷ್ಟೇ. ಇದರಲ್ಲಿ ಸರಕಾರದ ಘನಂದಾರಿ ಸಾಧನೆ ಏನೂ ಇಲ್ಲ ಎಂದು ಮೂದಲಿಸಿದ್ದಾರೆ.
ಸಿದ್ದರಾಮಯ್ಯ ಮೇ ತಿಂಗಳಲ್ಲಿಯೇ ಒಪಿಎಸ್ ಜಾರಿ ಮಾಡುವ ಭರವಸೆ ನೀಡಿದ್ದರು 2023 ಮೇ 20ರಂದು ಪ್ರಮಾಣ ಸ್ವೀಕರಿಸಿದ ಅವರು, ಸರಕಾರ ಬಂದ ಎರಡೇ ದಿನಕ್ಕೆ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದಿತ್ತು. ಅವರು ಚುನಾವಣಾ ಫಸಲು ತೆಗೆಯಲು ಹತ್ತು ತಿಂಗಳು ಹೊಂಚು ಹಾಕಿ ಕೂತರು. ಇದು ಚುನಾವಣೆ ಗಿಮಿಕ್ ಅಷ್ಟೇ ಎಂದು ಟೀಕಿಸಿದ್ದಾರೆ
2006 ಏಪ್ರಿಲ್ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006ರ ನಂತರ ನೇಮಕಗೊಂಡ 13,000 ನೌಕರರು ಹಳೆ ಪಿಂಚಣಿ ವ್ಯಾಪ್ತಿಗೆ ಬರುತ್ತಾರೆ ಎಂದು ಈ ಆದೇಶ ಹೇಳುತ್ತದೆ. ಈ ಗ್ಯಾರಂಟಿ ಸರಕಾರಕ್ಕೆ ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ 10 ತಿಂಗಳು ಬೇಕಾಯಿತು ಮಾತೆತ್ತಿದರೆ ಮೋದಿ ಅವರನ್ನು ನಿಂದಿಸುವ ಸಿದ್ದರಾಮಯ್ಯ ಅವರದ್ದು ಕೆಲಸದಲ್ಲಿ ಆಮೆವೇಗ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಎಚ್ ಡಿ ಕೆ ಕಾಲೆಳೆದಿದ್ದಾರೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಎಷ್ಟು ನೌಕರರಿಗೆ ಒಪಿಎಸ್ ನೀಡುವುದಾಗಿ ಭರವಸೆ ನೀಡಿತ್ತು, ಆದರೆ, ಸರಕಾರದ ಆದೇಶದಿಂದ 13,000 ನೌಕರರಿಗೆ ಮಾತ್ರ ಒಪಿಎಸ್ ಭಾಗ್ಯ ಸಿಗುತ್ತಿದೆ. ಉಳಿದವರು ಅಭಾಗ್ಯವಂತರೇ, ಒಪಿಎಸ್ ಗೆ ಅರ್ಹ ನೌಕರರು ಎಷ್ಟಿದ್ದಾರೆ ಎಂಬ ಮಾಹಿತಿ ಸರಕಾರಕ್ಕೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಪ್ರಣಾಳಿಕೆ ಮತ್ತು ಬಜೆಟ್ ನಲ್ಲಿ ಭರವಸೆ ನೀಡಿದಂತೆ ಸರಕಾರಿ ನೌಕರರಿಗೆ ಒಪಿಎಸ್ ಕೊಡಲೇಬೇಕು. ಅದನ್ನು ಬಿಟ್ಟು ನೌಕರರ ಕಣ್ಣಿಗೆ ಮಣ್ಣೆರಚುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

