ಸಂಸತ್ತಿನಲ್ಲಿ ಸದ್ದು ಮಾಡಿದ ಡಿ.ಕೆ ಸುರೇಶ್ ‌ಪ್ರತ್ಯೇಕ ರಾಷ್ಟ್ರ ಹೇಳಿಕೆ -ಕಾಂಗ್ರೆಸ್‌ ಕ್ಷಮೆ ಯಾಚನೆಗೆ ಆಗ್ರಹ

ನವದೆಹಲಿ: ಕಾಂಗ್ರೆಸ್‌ ಸಂಸದ ಡಿ.ಕೆ ಸುರೇಶ್‌ ಅವರ ಪ್ರತ್ಯೇಕ ರಾಷ್ಟ್ರ ಹೇಳಿಕೆ ಇಂದು ರಾಜ್ಯಸಭೆಯಲ್ಲಿ ತೀವ್ರ ಗದ್ದಲವೆಬ್ಬಿಸಿತು. ಈ ಸಂಬಂಧ ಕಾಂಗ್ರೆಸ್‌ ದೇಶದ ಜನರ ಕ್ಷಮೆ ಕೇಳಬೇಕೆಂದು ಕೆಲ ಸದಸ್ಯರು ‌ಆಗ್ರಹಿಸಿದರು.

ಸುರೇಶ್ ಹೇಳಿಕೆ ಬಗ್ಗೆ ಸಭಾನಾಯಕ ಪಿಯೂಶ್ ಗೋಯಲ್ ರಾಜ್ಯಸಭೆಯ ಕಲಾಪ ಪ್ರಾರಂಭವಾಗುತ್ತಿದ್ದಂತೆ ಪ್ರಸ್ತಾಪ ಮಾಡಿದರು.

ಜೊತೆಗೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಕ್ಷಮೆ ಕೇಳಬೇಕು. ವಿರೋಧ ಪಕ್ಷದ ನಾಯಕರು, ಅದೇ ಪಕ್ಷದ ನಾಯಕರು ಸುರೇಶ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿಲ್ಲ. ಕರ್ನಾಟಕದ ಡಿಸಿಎಂ ಸಹೋದರ ಹಾಗೂ ಸಂಸದರಾಗಿರುವ ಸುರೇಶ್ ಅವರು ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಲೋಕಸಭೆ ಸಂಸದರಾಗಿ ದೇಶವನ್ನು ಒಡೆಯುವ ಮಾತನಾಡಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು

ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ಏಕತೆ ಮತ್ತು ಸಾರ್ವಭೌಮತ್ವದ ಮುಂದೆ ಯಾವುದೂ ಇಲ್ಲ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ಹೇಳಿದರು.

ಡಿ.ಕೆ ಸುರೇಶ್ ಹೇಳಿಕೆಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿ, ಯಾರಾದರೂ ದೇಶ ಒಡೆಯುವ ಬಗ್ಗೆ ಮಾತನಾಡಿದರೆ ನಾವು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.

ಅವರು ಯಾವುದೇ ಪಕ್ಷದವರಾಗಿರಲಿ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು ಒಂದೇ ಮತ್ತು ಒಂದೇ ಆಗಿದ್ದೇವೆ. ಭಾರತ ಅಖಂಡವಾಗಿರಲಿದೆ ಎಂದು ನುಡಿದರು.