ದೇಶ ವಿಭಜನೆ ಯಾಗಬೇಕೆಂದು ನಾನು ಹೇಳಿಲ್ಲ -ಡಿ.ಕೆ.ಸುರೇಶ್

ಬೆಂಗಳೂರು: ಬಿಜೆಪಿ ನನ್ನ ಹೇಳಿಕೆಯನ್ನು ತಿರುಚಿ ಪ್ರತಿಭಟನೆ ನಡೆಸುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.

ತಮ್ಮನಿವಾಸದ ಬಳಿ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ಪ್ರಕರಣ ಸಂಬಂಧ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು,ದೇಶ ವಿಭಜನೆಯಾಗಬೇಕು ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ನಡೆಸುವ ಹಾಗೂ ಮಾತನಾಡುವ ಸ್ವಾತಂತ್ರ್ಯವಿದೆ, ಅದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದರು.

ಬಿಜೆಪಿಯವರ ಹೋರಾಟಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡುತ್ತದೆ, ನಾನು ಸ್ವಾಗತಿಸುತ್ತೇನೆ, ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದರಲ್ಲಿ ತಪ್ಪೇನು ಇಲ್ಲ, ನನ್ನ ಮನೆ ಬಳಿ ಬಂದವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ತಿಳಿಸಿದರು.

ನನ್ನ ಹೇಳಿಕೆಗಳು ಸ್ಪಷ್ಟವಾಗಿದೆ, ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ನಾನು ಮಾತನಾಡಿದ್ದೇನೆ. ಬಿಜೆಪಿಯವರು ಅದನ್ನು ತಿರುಚಿ ಪ್ರತಿಭಟನೆ ಮಾಡುತ್ತಿದ್ದಾರೆ, ನಾನು ಎಲ್ಲಿಯೂ ದೇಶ ವಿಭಜನೆಯ ಮಾತನಾಡಿಲ್ಲ ಎಂದರು.

ಇದು ಉದ್ದೇಶಪೂರ್ವಕವಾದ ಅಪಪ್ರಚಾರ, ರಾಜಕಾರಣದಲ್ಲಿ ಬೇರೆ ಬೇರೆ ಆಯಾಮವಿರುತ್ತದೆ. ಬಿಜೆಪಿಯವರು ಚುನಾವಣೆಯ ಕಾರಣಕ್ಕೆ ನಾನಾ ರೀತಿಯ ಷಡ್ಯಂತ್ರಗಳನ್ನು ರೂಪಿಸುತ್ತಿದ್ದಾರೆ ಎಂದು ಡಿ.ಕೆ ಸುರೇಶ್ ದೂರಿದರು.