ಸಂತೂರ್ ಮಹಿಳಾ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

ಮೈಸೂರು: ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ನೆರವು ಒದಗಿಸುವ ಸಂತೂರ್ ವಿದ್ಯಾರ್ಥಿವೇತನ ಯೋಜನೆಯ 9ನೇ ಆವೃತ್ತಿಯನ್ನು ವಿಪ್ರೋ ಕನ್ಸ್ಯೂಮರ್ ಕೇರ್ ಮತ್ತು ಲೈಟಿಂಗ್ ಪ್ರಾರಂಭಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪ್ರೋ ಕನ್ಸ್ಯೂಮರ್‌ ಮತ್ತು ಲೈಟಿಂಗ್‌ ನ ಕಾರ್ಯನಿರ್ವಾಹಕ ನೀರಜ್‌ ಖಾತ್ರಿ ಅವರು,ವಿಪ್ರೋ ಕನ್ಸೂಮರ್ ಕೇರ್ ಮತ್ತು ವಿಪ್ರೋ ಕೇರ್ಸ್ 9ನೇ ಆವೃತ್ತಿಯ ಸಂತೂರ್ ವಿದ್ಯಾರ್ಥಿವೇತನ ಯೋಜನೆಗೆ ವಿದ್ಯಾರ್ಥಿನಿಯ ರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಅರ್ಹ ವಿದ್ಯಾರ್ಥಿನಿಯರು ಸಂತೂರ್ ಮಹಿಳಾ ವಿದ್ಯಾರ್ಥಿ ವೇತನಕ್ಕಾಗಿ www.santoorscholarships.comಗೆ ಆನ್ಲೈನ್ ನಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30 ಎಂದು ಹೇಳಿದರು.

ಈ ವರ್ಷ ಸಂತೂರ್ ವಿದ್ಯಾರ್ಥಿವೇತನ ಕಾರ್ಯಕ್ರಮದ ಮೂಲಕ ಅಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಛತ್ತೀಸ್‌ಗಡ ರಾಜ್ಯಗಳ 1,500ರಷ್ಟು ಅರ್ಹ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಿ ನೆರವು ಒದಗಿಸಲಾಗುತ್ತಿದ್ದು, ಈ ರಾಜ್ಯಗಳ ಅಭಿವೃದ್ಧಿಶೀಲ ಜಿಲ್ಲೆಗಳ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

ಸಂತೂರ್ ವಿದ್ಯಾರ್ಥಿವೇತನ ಯೋಜನೆಯು 9ನೇ ವರ್ಷಕ್ಕೆ ಕಾಲಿಟ್ಟಿದ್ದು, ವಿಶೇಷವಾಗಿ ಆರ್ಥಿಕ ಅನಾನುಕೂಲತೆ ಹೊಂದಿರುವ ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ನೆರವು ಒದಗಿಸುವಲ್ಲಿ ವಿಪ್ರೋ ಕನ್ಯೂಮರ್ ಕೇರ್ ನಿರಂತರ ಬದ್ಧತೆ ತೋರಿಸುತ್ತಿದೆ ಎಂದರು.

ಈ ವಿದ್ಯಾರ್ಥಿವೇತನ ಕಾರ್ಯಕ್ರಮವು ವಿದ್ಯಾರ್ಥಿನಿಯರಿಗೆ ನೆರವು ಒದಗಿಸುವುದರ ಜೊತೆಗೆ ಅವರ ಸಮುದಾಯದ ಒಟ್ಟಾರೆ ಬೆಳವಣಿಗೆಗೂ ಕೊಡುಗೆ ನೀಡಲಿದೆ. ವಿದ್ಯಾರ್ಥಿವೇತನದ ಈ ಆವೃತ್ತಿಯೊಂದಿಗೆ ಒಟ್ಟು 50 ಕೋಟಿಗೂ ಹೆಚ್ಚು ಮೊತ್ತವನ್ನು ವಿತರಿಸಲಾಗಿದೆ. ಈ ವರ್ಷವೇ 10 ಕೋಟಿಗೂ ಹೆಚ್ಚು ವಿದ್ಯಾರ್ಥಿ ವೇತನ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಿ ಅವರಿಗೆ ಹೈಸ್ಕೂಲ್ ಮತ್ತು ಕಾಲೇಜಿನ ನಡುವೆ ಇರುವ ಕಂದಕವನ್ನು ದಾಟಲು ಸಹಾಯ ಮಾಡುತ್ತೇವೆ ಎಂದು ನೀರಜ್‌ ಸ್ಪಷ್ಟಪಡಿಸಿದರು.

ಈ ಮೂಲಕ ಸಮಾಜದಲ್ಲಿ ಬಹಳ ಅಗತ್ಯ ಇರುವ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸುತ್ತೇವೆ‌ ಎಂದು ಹೇಳಿದರು.

2016-17ರಲ್ಲಿ ಸಂತೂರ್ ವಿದ್ಯಾರ್ಥಿವೇತನ ಯೋಜನೆಯನ್ನು ಮೊದಲಬಾರಿಗೆ ಆಯೋಜಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಈ ಯೋಜನೆ ಮೂಲಕ 8,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಮತ್ತು ಅವರ ಶೈಕ್ಷಣಿಕ ಆಕಾಂಕ್ಷೆ ಪೂರೈಸಿಕೊಳ್ಳಲು ನೆರವು ಒದಗಿಸಿದೆ ಎMದವರು ವಿವರಿಸಿದರು.

ಸಂತೂರ್ ವಿದ್ಯಾರ್ಥಿವೇತನ ಯೋಜನೆಗೆ ಆಗಸ್ಟ್ 21 ರಿಂದ ಸೆಪ್ಟೆಂಬರ್ 30 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿದಾರರು ಹೆಚ್ಚಿನ ವಿವರಕ್ಕಾಗಿ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು : 7337835166, 7411654395/74116541395/74116541395/74116541394

ಅರ್ಜಿ ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು www.santoorscholarships.com ಗೆ ಭೇಟಿ ನೀಡಬಹುದಾಗಿದೆ.