ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕರಿಸಿದ ಗೌರ್ನರ್:ಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳ ತಡೆ ಮಸೂದೆ ಕುರಿತು ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಇದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ.

ಹಲವು ಲೋಪದೋಷಗಳನ್ನ ಗುರುತಿಸಿ ಸುಗ್ರೀವಾಜ್ಞೆಗೆ ಅಂಕಿತ ಹಾಕದೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಾಪಸ್ ಕಳುಹಿಸಿದ್ದಾರೆ.

ವಿಧಾನಮಂಡಲ ಅಧಿವೇಶನದಲ್ಲೇ ಮಸೂದೆ ಮಂಡಿಸಿ ಚರ್ಚೆ ಮಾಡಿ ಕಳುಹಿಸಿ ಎಂದು ಸೂಚಿಸಿದ್ದಾರೆ.

ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದ ಸರ್ಕಾರ ಈಗ ಸುಗ್ರೀವಾಜ್ಞೆ ಕರಡು ಬಿಲ್ ಪರಿಷ್ಕರಣೆ ಮಾಡಿ ಮಸೂದೆ ತರಬೇಕಿದೆ.

ಮಸೂದೆಯಲ್ಲಿ ಸಾಲ ಪಡೆದವರಿಗೆ ರಕ್ಷಣೆ ಇದೆ. ಆದರೆ ಸಹಜ ನ್ಯಾಯದ ಅಡಿಯಲ್ಲಿ ಸಾಲ ಕೊಟ್ಟವರಿಗೆ ರಕ್ಷಣೆ ಇಲ್ಲ. ಅಲ್ಲದೇ ಆರ್‌ಬಿಐ ನಿಯಮಗಳು, ಪೊಲೀಸ್ ನಿಯಮಗಳಲ್ಲಿ ವ್ಯತಿರಿಕ್ತ ಪರಿಣಾಮಗಳಿವೆ. ಸಾಲಪಡೆದವರಿಗೆ ರಕ್ಷಣೆ ಇರುವಂತೆ, ಸಾಲ ಕೊಡುವವರಿಗೂ ರಕ್ಷಣೆ ಇರಬೇಕು, ವಿಧಾನ ಮಂಡಲ ಅಧಿವೇಶನ ಹತ್ತಿರದಲ್ಲೇ ಇದೆ, ಅಲ್ಲೇ ಮಸೂದೆ ಮಂಡನೆ ಮಾಡಿ, ಚರ್ಚೆ ಬಳಿಕ ಅಂಗೀಕಾರ ಮಾಡಬಹುದು ಎಂದು ರಾಜ್ಯಪಾಲರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.