ಅವಹೇಳನಕಾರಿ ಚಿತ್ರವುಳ್ಳ ಪೋಸ್ಟ್: ಬೂದಿಮುಚ್ಚಿದ ಕೆಂಡವಾದ ಉದಯಗಿರಿ

ಮೈಸೂರು: ವ್ಯಕ್ತಿಯೊಬ್ಬ ಮಾಡಿದ ಅವಹೇಳನಕಾರಿ ಚಿತ್ರವುಳ್ಳ ಪೋಸ್ಟ್ ನಿಂದಾಗಿ ಉದ್ವಿಗ್ನಗೊಂಡಿದ್ದ ಮೈಸೂರಿನ ಉದಯಗಿರಿ ಈಗ ಬೂದಿಮುಚ್ಚಿದ ಕೆಂಡದಂತಿದೆ.

ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಸಂಬಂಧ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಸದ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರಗಳನ್ನು ವಿವಸ್ತ್ರಗೊಳಿಸಿ, ತಲೆ ಮೇಲೆ ಮುಸ್ಲಿಂ ಸಮುದಾಯ ಬಳಸುವ ಟೋಪಿ ಇಟ್ಟು, ದೇಹದ ಮೇಲೆಲ್ಲಾ ಉರ್ದು ಭಾಷೆಯ ಕೆಲ ಪದಗಳನ್ನು ಬರೆದು ಸಾರ್ವಜನಿಕವಾಗಿ ಹಂಚಿಕೆ ಮಾಡಿದ್ದರಿಂದ ಮುಸ್ಲಿಂ ಸಮುದಾಯ ಉದ್ವಿಗ್ನಗೊಂಡಿದೆ.

ಪೋಸ್ಟರ್ ಕುರಿತು ಸೋಮವಾರ ರಾತ್ರಿ ಮಾಹಿತಿ ತಿಳಿದ ಮುಸ್ಲಿಂ ಸಮುದಾಯದ ಸಾವಿರಾರು ಮಂದಿ ಏಕಕಾಲದಲ್ಲಿ ಉದಯಗಿರಿ ಮುಖ್ಯ ರಸ್ತೆಯಲ್ಲಿ ಜಮಾಯಿಸಿ,ರಸ್ತೆ ತೆಡೆದು‌ ಪ್ರತಿಭಟನೆಗಿಳಿದಿದ್ದಾರೆ.

ಇದೇ ವೇಳೆ ಒಂದು ಗುಂಪು ಉದಯಗಿರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿತಲ್ಲದೆ, ತಪ್ಪಿತಸ್ಥನನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.

ಕಲ್ಲು ತೂರಾಟ ಕೂಡಾ ಪ್ರಾರಂಭವಾಗಿ ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪೊಲೀಸರು ಕೂಡಲೇ ಹೆಚ್ಚುವರಿ ಪಡೆ ಕರೆಸಿಕೊಂಡು ಗುಂಪನ್ನು ನಿಯಂತ್ರಿಸುವ ಕೆಲಸ ಮಾಡಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಕಂಡ ಪೊಲೀಸರು ಕೂಡಲೇ ಲಾಠಿ ಪ್ರಹಾರ ಮಾಡಿ,ಆಶ್ರುವಾಯು ಸಿಡಿಸಿ ಗುಂಪನ್ನು ಚದುರಿಸಬೇಕಾಯಿತು.

ನಂತರ ಒಂದು ಸಮುದಾಯದ ಗುಂಪಿನ ಪ್ರಮುಖರು ತಮ್ಮ ಜನರನ್ನು ಸಂತೈಸುವ ನಿಟ್ಟಿನಲ್ಲಿ ಕೆಲಸ ಮಾಡಿದರಾದರೂ ಪ್ರತಿಭಟನೆ ಮತ್ತಷ್ಟು ತಾರಕಕ್ಕೇರಿತು.

ಈ ವೇಳೆ ರಾಜ್ಯ ಮೀಸಲು ಪೊಲೀಸ್ ಪಡೆ ಹಾಗೂ ನಗರ ಸಶಸ್ತ್ರ ಮೀಸಲು ಪಡೆಯ ಹೆಚ್ಚುವರಿ ತುಕಡಿಗಳನ್ನು ಸ್ಥಳಕ್ಕೆ ಕರೆಸಿ ಆಕ್ರೋಶಭರಿತ ಗುಂಪನ್ನು ಚದುರಿಸಲಾಯಿತು.

ಸದ್ಯ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ, ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸ್ ಇಲಾಖೆಯ ಹಿರಿಯ ಉನ್ನತಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ಶಾಸಕ‌ ತನ್ವೀರ್ ಸೇಠ್ ಸ್ಥಳೀಯರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.