ಮಂಗಳೂರು: ವಕ್ಫ್ ಬಿಲ್ ಅಂಗೀಕಾರ ಆಗಿರುವ ಹಿನ್ನೆಲೆ ವಕ್ಫ್ ಅಕ್ರಮದ ಬಗ್ಗೆ ವರದಿ ತಯಾರಿಸಿದ್ದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರಿಗೆ ಬೆದರಿಕೆ ಕರೆಗಳು ಬಂದಿವೆ.
ಕಳೆದ ಎರಡು ಮೂರು ದಿನಗಳಿಂದ ನಿರಂತರ ಇಂಟರ್‌ನೆಟ್ ಕಾಲ್ ಮೂಲಕ ಬೆದರಿಕೆ ಬರುತ್ತಿದೆ.
ಕನ್ನಡ, ಇಂಗ್ಲಿಷ್, ಉರ್ದು, ಮರಾಠಿ ಭಾಷೆಗಳಲ್ಲಿ ಬೆದರಿಕೆ ಹಾಕುತ್ತಿದ್ದಾರೆ. ನಿನ್ನನ್ನು ಬಿಡುವುದಿಲ್ಲ, ನಿನ್ನ ವರದಿಯಿಂದ ತೊಂದರೆಯಾಗಿದೆ ಎಂದು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅನ್ವರ್ ತಿಳಿಸಿದ್ದಾರೆ.
ಅನ್ವರ್ ಮಾಣಿಪ್ಪಾಡಿ, ನೀನು ಬಹಳಷ್ಟು ನಾಯಕರು, ವ್ಯಕ್ತಿಗಳ ವಿರುದ್ಧ ತಪ್ಪು ಮಾಹಿತಿ ಕೊಟ್ಟಿದ್ದೀಯ. ಎಲ್ಲರೂ ನೊಂದಿದ್ದಾರೆ. ಯಾರು ಕೂಡ ನಿನ್ನನ್ನು ಕ್ಷಮಿಸಲ್ಲ. ನಿಮ್ಮನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರಂತೆ.
ನನ್ನ ಕಸಿನ್ ಒಬ್ಬರು ಪೊಲೀಸ್ ಆಫೀಸರ್. ನನಗೆ ಕರೆ ಮಾಡಿ ಜೋಪಾನವಾಗಿರಪ್ಪ, ಮನೆಯಿಂದ ಹೊರಗಡೆ ಒಬ್ಬನೇ ಹೋಗಬೇಡ ಅಂತ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ನನ್ನ ವರದಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರನ್ನು ಉಲ್ಲೇಖಿಸಿದ್ದೇನೆ. ಕಲಬುರಗಿಯಲ್ಲಿ ದೊಡ್ಡ ದೊಡ್ಡ ಮಾಲ್, ಬಿಲ್ಡಿಂಗ್‌ಗಳಿವೆ. ಅವರ ಹೆಸರಲ್ಲಿ ಅಲ್ಲದಿದ್ದರೂ, ಬೇರೆಯವರ ಹೆಸರಲ್ಲಿ ಒತ್ತುವರಿಯಾಗಿದೆ, ಬಹುಪಾಲು ಬೇನಾಮಿ ಆಸ್ತಿ ಎಂದು ತಿಳಿಸಿದ್ದಾರೆ.
ಸಂಸತ್‌ನಲ್ಲಿ ಅಂಗೀಕಾರವಾದ ವಕ್ಫ್ ತಿದ್ದುಪಡಿ ಮಸೂದೆ ಈಗ ದೇಶಾದ್ಯಂತ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ವಕ್ಫ್ ವಿಚಾರದಲ್ಲಿ ವರದಿ ತಯಾರಿಸಿದ್ದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ ಬೆದರಿಕೆ ಕರೆಗಳು ಬಂದಿವೆ.
ಚರ್ಚೆ ವೇಳೆ ಕರ್ನಾಟಕದ ವಕ್ಫ್ ಒತ್ತುವರಿ ಕುರಿತು ಅನ್ವರ್ ಮಾಣಿಪ್ಪಾಡಿ ವರದಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಸ್ತಾಪಿಸಿದ್ದನ್ನು ಸ್ಮರಿಸಬಹುದಾಗಿದೆ.