ರಾಮಲಲ್ಲಾನ ಹಣೆಯ ಮೇಲೆ ಮೂಡಿದ ಸೂರ್ಯ ಕಿರಣ: ಭಕ್ತಗಣ ಖುಷ್

ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ರಾಮನವಮಿ ಸಂಭ್ರಮ ಮನೆ ಮಾಡಿದೆ.ಈ ಶುಭ ಸಂದರ್ಭದಲ್ಲಿ ರಾಮಲಲ್ಲಾನ ಹಣೆಯ ಮೇಲೆ ಸೂರ್ಯ ಕಿರಣ ಮೂಡಿದ್ದು ಭಕ್ತರ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಸೂರ್ಯನ ಕಿರಣ ನೇರವಾಗಿ ರಾಮಲಲ್ಲಾ ಹಣೆಯ ಮೇಲೆ ಬಿದ್ದ ದಿವ್ಯ ದೃಶ್ಯ ಕಂಡುಬಂದಿತು.ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಬಿದ್ದ ಸೂರ್ಯನ ಕಿರಣ, ದಿವ್ಯ ತಿಲಕ ಇಟ್ಟಂತೆ ಭಾಸವಾಯಿತು.

ಸೂರ್ಯ ಕಿರಣವು ದೇವರ ಹಣೆಯನ್ನು ಬೆಳಗಿಸಿ, ಆಚರಣೆಗಳಿಗೆ ಆಧ್ಯಾತ್ಮಿಕ ಹೊಳಪನ್ನು ನೀಡಿತು.

ದೇಶಾದ್ಯಂತ ರಾಮನವಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಇದು ವಿಷ್ಣುವಿನ ಏಳನೇ ಅವತಾರವಾದ ಭಗವಾನ್ ರಾಮನ ಜನ್ಮ ವಾರ್ಷಿಕೋತ್ಸವದ ದಿನ.

ಜನರು ದೇವಾಲಯಗಳಿಗೆ ತೆರಳಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲಲ್ಲಿ ಭಜನೆಗಳು, ಮೆರವಣಿಗೆಗಳು ಮತ್ತು ಜಪಗಳು ನಡೆಯುತ್ತಿವೆ. ದೃಕ್ ಪಂಚಾಂಗದ ಪ್ರಕಾರ, ಭಗವಾನ್ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಜನಿಸಿದ್ದ.

ರಾಮನವಮಿ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರವು ಹೂವು, ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಲಕ್ಷಾಂತರ ಭಕ್ತರು ರಾಮಮಂದಿರಕ್ಕೆ ತೆರಳಿ ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ.