ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಕಾಂಗ್ರೆಸ್ ವಿರೂಪಗೊಳಿಸಿದ್ದು ಅಪರಾಧ ಎಂದು
ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿತ್ವಕ್ಕೆ ಅಪಮಾನ ಮಾಡುವಂತೆ ಕಾಂಗ್ರೆಸ್ ಪೋಸ್ಟ್ ಮಾಡಿದೆ. ಸಿಎಂ ಸಿದ್ದರಾಮಯ್ಯ, ಸಚಿವ ತಿಮ್ಮಾಪುರ ಅವರ ಹೇಳಿಕೆ ನಮ್ಮ ಹೇಳಿಕೆಯಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸ್ಪಷ್ಟವಾಗಿ ಹೇಳಿದ್ದಾರೆ. ಅಂದಮೇಲೆ ಇವರಿಗೆಲ್ಲ ಯಾವ ಮರ್ಯಾದೆ ಉಳಿದಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಅಸಾದುದ್ದೀನ್ ಓವೈಸಿ ಪಾಕಿಸ್ತಾನಕ್ಕೆ ಸವಾಲು ಹಾಕಿದ್ದಾರೆ. ಸಿಎಂ ರೇವಂತ್ ರೆಡ್ಡಿ ಕೂಡ ದೇಶಭಕ್ತಿ ಪ್ರದರ್ಶಿಸಿದ್ದಾರೆ. ಇವರೆಲ್ಲರೂ ಅಂಥವರ ಬಳಿ ದೇಶಭಕ್ತಿಯ ಪಾಠ ಹೇಳಿಸಿಕೊಳ್ಳಬೇಕು ಎಂದು ಅಶೋಕ್ ವ್ಯಂಗ್ಯ ವಾಡಿದರು.
ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯೇ ತಪ್ಪು ಒಪ್ಪಿಕೊಂಡಿದ್ದಾರೆ. ಆದರೆ ಇಲ್ಲಿನ ಕಾಂಗ್ರೆಸ್ ನಾಯಕರು ಎಲ್ಲಕ್ಕೂ ಪ್ರಧಾನಿ ಮೋದಿಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಅತಿ ಕಡಿಮೆ ಮತಗಳಲ್ಲಿ ಗೆದ್ದ ಸಿಎಂ ಸಿದ್ದರಾಮಯ್ಯ ಪಾಕಿಸ್ತಾನದಲ್ಲಿ ಹೀರೋ ಆಗಿದ್ದಾರೆ. ಅವರು ಲಾಹೋರ್‌ಗೆ ಹೋಗಿ ಚುನಾವಣೆಗೆ ನಿಂತರೆ ಒಂದು ಲಕ್ಷ ಮತ ಅಂತರದಲ್ಲಿ ಜಯ ಸಾಧಿಸಬಹುದು. ಮುಂದೆ ಅವರಿಗೆ ಪಾಕಿಸ್ತಾನದ ನಾಗರಿಕ ಪ್ರಶಸ್ತಿಯೂ ಸಿಗಬಹುದು ಲೇವಡಿ ಮಾಡಿದರು.
ಶಾಂತಿಪ್ರಿಯರೆಂದು ಹೇಳಿಕೊಳ್ಳುವ ಸಿಎಂ ಪೊಲೀಸ್ ಅಧಿಕಾರಿಗೆ ಹೊಡೆಯಲು ಹೋಗಿದ್ದಾರೆ. ಇದು ಇಡೀ ಪೊಲೀಸ್ ಇಲಾಖೆಗೆ ಮಾಡಿದ ಅವಮಾನ. ಪೊಲೀಸರನ್ನು ಯಾರು ಬೇಕಾದರೂ ಹೊಡೆಯಬಹುದು ಎಂದು ಮುಖ್ಯಮಂತ್ರಿಯೇ ಸಂದೇಶ ನೀಡಿದ್ದಾರೆ ಎಂದು ಅಶೋಕ್ ಟೀಕಾಪ್ರಹಾರ ನಡೆಸಿದರು.
ಭಯೋತ್ಪಾದಕರು ಧರ್ಮ ನೋಡಿ ಸಾಯಿಸಿಲ್ಲ ಎಂದಾದರೆ ಕಾಂಗ್ರೆಸ್‌ನವರು ಮಾಧ್ಯಮಗಳು ಹಾಗೂ ಸಂತ್ರಸ್ತರ ವಿರುದ್ಧ ಪ್ರಕರಣ ದಾಖಲಿಸಲಿ ಇಲ್ಲದಿದ್ದಲ್ಲಿ ಮಂಡಿಯೂರಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.