ಮೈಸೂರು: ಸಾಲ ಮಾಡಿ ಮದುವೆ ಆಗಬೇಡಿ ಸರಳವಾಗಿ ವಿವಾಹ ಆಗುವ ಮೂಲಕ ಎಲ್ಲರಿಗೂ ಮಾದರಿ ಆಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು ಅವರು ಯುವ ಜನತೆಗೆ ಸಲಹೆ ನೀಡಿದರು.
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಆವರಣದಲ್ಲಿ ಜಿಲ್ಲಾಡಳಿತ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ವೇಳೆ ಅವರು ಮಾತನಾಡಿದರು.
ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ತಪ್ಪಿಸಲು ಆರಂಭಿಸಿರುವ ಯೋಜನೆ ಇದು, ಮಾಂಗಲ್ಯ ಭಾಗ್ಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. 2020 ರಿಂದ ಈ ಯೋಜನೆ ಪ್ರಾರಂಭವಾಗಿದೆ ಎಂದು ತಿಳಿಸಿದರು.
ಆಡಂಬರದ ಮದುವೆ ಮಾಡಿ ಸಾಲ ತೀರಿಸಲು ಕಷ್ಟ ಪಡುವುದು ಬೇಡ. ಈ ರೀತಿ ಸರಳವಾಗಿ ಮದುವೆ ಆಗುವುದರಿಂದ ಆರ್ಥಿಕವಾಗಿ ಹಣ ಉಳಿತಾಯ ಆಗಲಿದೆ. ಈ ಹಣವನ್ನು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಈ ಬಾರಿ 24 ಜೋಡಿಗಳು ಸಾಮೂಹಿಕ ವಿವಾಹ ಆಗಿದ್ದು , ಮುಂದಿನ ವರ್ಷ ಕನಿಷ್ಠ 100 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಮದುವೆ ಆಗಬೇಕು ಎಂದು ತಿಳಿಸಿದರು.
ನಂಜನಗೂಡು ನಗರಸಭೆ ಅಧ್ಯಕ್ಷ ಶ್ರೀಕಂಠ ಅವರು ಮಾತನಾಡಿ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸಿರುವುದು ಉತ್ತಮವಾದ ಕಾರ್ಯ ಇದರಿಂದ ದುಂದು ವೆಚ್ಚ ತಡೆಯಲು ಸಾಧ್ಯ, ಬಡವರಿಗೆ ಇದು ಅನುಕೂಲವಾಗಿದೆ,ಆದ್ದರಿಂದ ಇನ್ನೂ ಹೆಚ್ಚು ಹೆಚ್ಚು ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸನೂರು, ಶ್ರೀಕಂಠೇಶ್ವರ ದೇವಾಲಯದ ಜಗದೀಶ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ ಹರೀಶ್, ವೃತ್ತ ನಿರೀಕ್ಷಕ ರವೀಂದ್ರ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.