ಚಿಕ್ಕಬಳ್ಳಾಪುರ: ಬಿಜೆಪಿಯವರಿಗೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದು ಮತ್ತು ರಾಜಕೀಯವಾಗಿ ರಾಜೀನಾಮೆ ಕೇಳುವುದು ಅಭ್ಯಾಸವಾಗಿದೆ ಎಂದು ಸಿಎಂ ಸುದ್ದರಾಮಯ್ಯ ದೂರಿದರು.
ಗೌರಿಬಿದನೂರಿನ ಬೊಮ್ಮಸಂದ್ರ ಗ್ರಾಮ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ಬಿಜೆಪಿ ಎಲ್ಲದರಲ್ಲೂ ರಾಜಕೀಯ ಮಾಡೇ ಮಾಡುತ್ತದೆ ಎಂದು ಟೀಕಿಸಿದರು.
ಬಿಜೆಪಿ ವತಿಯಿಂದ ಮುಖ್ಯಮಂತ್ರಿಗಳ ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದು, ಕುಂಭ ಮೇಳದಲ್ಲಿ 40-50 ಜನ ಕಾಲ್ತುಳಿತದಲ್ಲಿ ಮೃತಪಟ್ಟರು, ಆಗ ಅಲ್ಲಿನ ಮುಖ್ಯಮಂತ್ರಿಗಳ ರಾಜೀನಾಮೆ ಕೇಳಿದರೇ ಎಂದು ಪ್ರಶ್ನಿಸಿದರು.
ಸೇತುವೆಯೊಂದು ಉದ್ಘಾಟನೆಯಾದ ದಿನವೇ ಬಿದ್ದು 140 ಜನ ಸತ್ತರು ಆಗ ಪ್ರಧಾನಿಗಳ ರಾಜಿನಾಮೆ ಕೇಳಿದರೇ, ಗೋಧ್ರಾ ಹತ್ಯಾಕಾಂಡದಲ್ಲಿ ಎಷ್ಟು ಜನ ಸತ್ತರು. ಆಗ ಗುಜರಾತ್ ಮುಖ್ಯಮಂತ್ರಿ ಯಾರಾಗಿದ್ದರು, ಅವರ ರಾಜಿನಾಮೆ ಕೇಳಿದರೇ ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಸರಬರಾಜು ಮಾಡದೇ 23 ಜನ ಸತ್ತಾಗ ಬಸವರಾಜ ಬೊಮ್ಮಾಯಿ ರಾಜಿನಾಮೆ ನೀಡಿದರೆ ಎಂದು ಮುಖ್ಯಮಂತ್ರಿಗಳು ಪ್ರಶ್ನೆಗಳ ಸುರಿಮಳೆಗೈದರು.
ಇಡಿ ಯವರು ದಾಳಿ ಮಾಡಿದ್ದು ಯಾವುದೇ ಕಾನೂನಿನ ಉಲ್ಲಂಘನೆಯಾಗಿದ್ದರೆ ಅದಕ್ಕೆ ನಾವು ಬೆಂಬಲಿಸುವುದಿಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಕಾನೂನಿನ ಅನುಷ್ಠಾನಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಸಿಎಂ ತಿಳಿಸಿದರು.
ಜಾತಿ ಗಣತಿ ಬಗ್ಗೆ ಕೆಲವು ದೂರುಗಳು ಬಂದಿವೆ. ಸಮೀಕ್ಷೆ ನಡೆದು 10 ವರ್ಷಗಳಾಗಿದ್ದು, ಹಳೆಯದಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಕಡಿಮೆ ಅವಧಿಯಲ್ಲಿ ಮರುಗಣತಿ ಕೈಗೊಳ್ಳಲು ಸೂಚಿಸಿದ್ದಾರೆ. ವರದಿಯನ್ನು ನಾವು ತಿರಸ್ಕರಿಸುವುದಿಲ್ಲ. ತಾತ್ವಿಕವಾಗಿ ವರದಿಯನ್ನು ಒಪ್ಪಿಕೊಳ್ಳಲಾಗಿದೆ ಎಂದು ಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಲ್ತುಳಿತ ಪ್ರಕರಣದಲ್ಲಿ ಅನೇಕ ಆಯೋಗ ರಚನೆಯಾಗಿದ್ದು ಇವು ತಾರ್ಕಿಕ ಅಂತ್ಯ ಕಾಣುವುದೇ ಎಂಬ ಮಾಧ್ಯಮಗಳ ಪ್ರಶ್ನೆಗೆ,ತನಿಖೆ ಕೈಗೊಳ್ಳಲು ಏಕ ವ್ಯಕ್ತಿ ಆಯೋಗ ರಚನೆ ಮಾಡಿದ್ದು ಅದು 30 ದಿನಗಳಲ್ಲಿ ವರದಿ ಸಲ್ಲಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮೋದಿ ಆಡಳಿತದಲ್ಲಿ ದೇಶದಲ್ಲಿ ಬಡತನ ಕಡಿಮೆಯಾಗಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಬಡತನ ಅವರಿಂದ ಕಡಿಮೆಯಾಗಿಲ್ಲ, ಬಡತನ ಹೋಗಲಾಡಿಸಲು ಅವರೇನು ಮಾಡಿದ್ದಾರೆ ಗರೀಬಿ ಹಟಾವೋ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಂದ ಬಡತನ ಕಡಿಮೆಯಾಗಿದೆ ಎಂದು ಹೇಳಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಅನುದಾನ ಒದಗಿಸಲಾಗಿದೆ ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.