ವಿಜೃಂಭಣೆಯಿಂದ ಜರುಗಿದ ಆಷಾಡಮಾಸದ ರಥೋತ್ಸವ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಆಷಾಢಮಾಸದ ರಥೋತ್ಸವ ಎಂದೆ ಹೆಸರುವಾಸಿಯಾದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ರಥೋತ್ಸವ ಗುರುವಾರವಾರ
ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿವಿಧ ಅಭಿಷೇಕ, ಉತ್ಸವ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಕೆಂಪನಂಜಾಂಬಾ ಅಮ್ಮನವರ ಸಮೇತ ಶ್ರೀಚಾಮರಾಜೇಶ್ವರ ಸ್ವಾಮಿಗೆ ವಿಶೇಷಪೂಜೆ, ಬಿಲ್ವಾರ್ಚನೆ, ಮಹಾಮಂಗಳಾರತಿ ಮಾಡಲಾಯಿತು.

ನಂತರ ಗಣೇಶ, ಸುಬ್ರಹ್ಮಣ್ಯ, ಜಯಚಾಮರಾಜೇಂದ್ರ ಒಡೆಯರ್ ಉತ್ಸವಮೂರ್ತಿಗಳೊಂದಿಗೆ ದೇವಸ್ಥಾನ ಪ್ರದರ್ಶಣೆ ಹಾಕಲಾಯಿತು.

ಬಳಿಕ ದೇವಸ್ಥಾನದ ಮುಂಭಾಗ ಅಲಂಕೃತಗೊಂಡಿದ್ದ ಮಧ್ಯಾಹ್ನ ೧೧.೩೦ರಿಂದ ೧೨.೧೫ ರೊಳಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಚಿನ್ನಾಭರಣ ಅಲಂಕೃತ ಚಾಮರಾಜೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಪೊಲೀಸ್ ವರಿಷ್ಟಾಧಿಕಾರಿ ಡಾ.ಕವಿತಾ, ಸ್ಥಳೀಯ ಜನಪ್ರತಿನಿದಿಗಳು ಸೇರಿದಂತೆ ಇತರರರು ಪೂಜೆ ಸಲ್ಲಿಸಿದರು.

ಬಳಿಕ ತೆಂಗಿನಕಾಯಿ ಒಡೆದು ತೇರು ಎಳೆಯಲು ಚಾಲನೆ ನೀಡಲಾಯಿತು.

ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ತೇರನ್ನು ಎಳೆದರೆ, ನವಜೋಡಿಗಳು ಹಣ್ಣು ಧವನ ಎಸೆದು ಭಕ್ತಿ ಸಮರ್ಪಿಸಿದರು.

ಚಾಮರಾಜೇಶ್ವರಸ್ವಾಮಿಯ ರಥದ ಮುಂಭಾಗದಲ್ಲಿ ಮಹಾರಾಜರ ಉತ್ಸವಮೂರ್ತಿ, ಗಣಪತಿ ದೇವರು ಚಿಕ್ಕ ರಥಗಳಲ್ಲಿ ಸಾಗಿದರೆ ಹಿಂಭಾಗದಲ್ಲಿ ಕೆಂಪನಂಜಾಂಬ ಪಾರ್ವತಿ ದೇವರ ರಥ ಸಾಗಿತು.

ರಥವು ದೇವಸ್ಥಾನದ ಮುಂಭಾಗದಿಂದ ದಕ್ಷಿಣಾಭಿಮುಖವಾಗಿ ರಥದ ಬೀದಿ, ಎಸ್‌ಬಿಎಂ ರಸ್ತೆ, ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ವೃತ್ತ, ಮಾರಮ್ಮ ದೇವಸ್ಥಾನದ ರಸ್ತೆ, ಹಳೇ ತರಕಾರಿ ಮಾರುಕಟ್ಟೆ ರಸ್ತೆಯಲ್ಲಿ ಸಾಗಿ ಮತ್ತೆ ದೇವಸ್ಥಾನದ ಮುಂಭಾಗ ತಲುಪಿತು.

ರಥೋತ್ಸವಕ್ಕೂ ಮೊದಲು ದೇವಸ್ಥಾನದ ಒಳಾಂಗಣದಲ್ಲಿ ಚಾಮರಾಜೇಶ್ವರಸ್ವಾಮಿಯ ಉತ್ಸವಮೂರ್ತಿ, ಕೆಂಪನಂಜಾಂಬ ಪಾರ್ವತಿ ದೇವರು ಹಾಗೂ ಮಹಾರಾಜರ ಉತ್ಸವಮೂರ್ತಿಗಳ ಉತ್ಸವ ನಡೆಯಿತು.

ನವ ಜೋಡಿಗಳು ಭಾಗಿ : ಆಷಾಢ ಮಾಸದಲ್ಲಿ ಚಾಮರಾಜೇಶ್ವರ ರಥೋತ್ಸವ ನಡೆಯುವುದು ವಿಶೇಷ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳು ಒಟ್ಟಾಗಿ ಜಾತ್ರೆಯಲ್ಲಿ ಪಾಲ್ಗೊಳ್ಳುವುದೂ ಕೂಡಾ ವಿಶೇಷ. ರಥೋತ್ಸವದಲ್ಲಿ ನೂರಾರು ನವ ದಂಪತಿಗಳು ಪಾಲ್ಗೊಂಡು ಹಣ್ಣು, ದವನ ಎಸೆದರು. ರಥೋತ್ಸವದ ಬಳಿಕ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.

ಬಿಗಿ ಪೊಲೀಸ್ ಬಂದೋಬಸ್ತ್ : ರಥೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದ ಬಳಿ ಹಾಗೂ ತೇರು ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ಕಡೆಗಳಲ್ಲೂ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿತ್ತು. ಕಳ್ಳತನ ಸಂಬಂಧ ಧ್ವನಿವರ್ಧಕದ ಮೂಲಕ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಿದರು.

ಇದೆ ಮೊದಲ ಬಾರಿಗೆ ರಥೋತ್ಸವ ಮುಂಭಾಗ ತಳ್ಳಾಟ ನೂಕಾಟ ಆಗದಂತೆ ಸೂಕ್ತ ಬ್ಯಾರಿಕೆಡ್ ಹಾಕಲಾಗಿತ್ತು.

ಅನದಿಕೃತ ಡ್ರೋಣ್ ಹಾರಾಟ: ಜಾತ್ರೆ ಸಂದರ್ಭದಲ್ಲಿ ಅನಧಿಕೃತ ಅನುನತಿ ರಹಿತವಾಗಿ ಡ್ರೋಣ್ ಹಾರಾಟ ಮಾಡಿದವರ ಮೇಲೆ ಕ್ರಮ ಕೈಗೊಳ್ಳದ್ದರಿಂದ ಈ ಸಲವೂ ಅನಧಿಕೃತವಾಗಿ ಡ್ರೋಣ್ ಗಳ ಹಾರಾಟ ಕಂಡುಬಂದಿತು.