ಮೈಸೂರು: ನಮ್ಮನ್ನು ನಿಂದಿಸುವಾಗ ಹಿಂದೂ ಎಂದು ಹೇಳಲಾಗುತ್ತಿದೆ, ಆದರೆ ಮೆಚ್ಚಿಕೊಳ್ಳುವಾಗ ಮಾತ್ರ ಹಿಂದೂ ಎಂದು ಹೇಳುವ ಮನಸ್ಸು ಯಾರಲ್ಲೂ ಇಲ್ಲವಾಗಿದೆ ಎಂದು ಖ್ಯಾತ ಚಿಂತಕರಾದ ರಘುನಂದನ್ ವಿಷಾದಿಸಿದರು.
ಮಂಥನ ಮೈಸೂರು ವೇದಿಕೆಯ ವತಿಯಿಂದ ಲಕ್ಷ್ಮಿಪುರಂ ನ ಮಾಧವ ಕೃಪಾದಲ್ಲಿ ಹಿಂದುತ್ವ- ವರ್ತಮಾನದ ಸಂದರ್ಭದಲ್ಲಿ ಹಿಂದುತ್ವದ ಪ್ರಸ್ತುತತೆ ಪುಸ್ತಕದ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದುತ್ವವೇ ಬೇರೆ, ಹಿಂದೂಯಿಸಮ್ ಎನ್ನುವುದೇ ಬೇರೆ,
ಆರ್ ಎಸ್ ಎಸ್ ಹಿಂದುತ್ವವೇ ಬೇರೆ, ವಿವೇಕಾನಂದರ ಹಿಂದುತ್ವವೇ ಬೇರೆ ಎನ್ನುವ ಹಲವಾರು ನರೇಟಿವ್ ಗಳನ್ನು ಸೃಷ್ಟಿಸಲಾಗುತ್ತಿದೆ. ಆದರೆ
ಹಿಂದುತ್ವ ಎನ್ನುವುದಕ್ಕೆ ವಿಶಾಲವಾದ ಅರ್ಥವಿದೆ. ಜ್ಞಾನ ಪರಂಪರೆಗೆ ಮತ್ತು ವಿಕಾಸಕ್ಕೆ ನಡೆದ ಎಲ್ಲ ಪ್ರಯತ್ನಗಳೂ ಹಿಂದುತ್ವವೇ ಎಂದು ಅವರು ವಿವರಿಸಿದರು.
ಸೆಕ್ಯುಲರ್’ ಎನ್ನುವುದೇ ಹಿಂದೂಗಳಿಗೆ ಮಾಡಿದ ದೊಡ್ಡ ಮೋಸವಾಗಿದ್ದು, ಅದರ ತಪ್ಪು ತಪ್ಪಾದ ಭಾಷಾಂತರವಂತೂ ಮತ್ತಷ್ಟು ಮೋಸಗೊಳಿಸುವುದಕ್ಕೇ ಮಾಡಿದ್ದಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹಿಂದೂ ಎನ್ನುವ ಶಬ್ದಕ್ಕೆ ಭೂಮಿಗಿಂತಲೂ ದೊಡ್ಡ ಅರ್ಥವಿದೆ. ಅಬ್ರಹಾಮಿಕ್ ರಿಲಿಜನ್ ಗಳು ಮತ್ತು ಹಿಂದೂ ಜೀವನ ಪದ್ಧತಿಗಳ ನಡುವಿನ ಮೂಲಭೂತ ವ್ಯತ್ಯಾಸವನ್ನು ಪ್ರತಿಯೊಬ್ಬ ಹಿಂದೂ ಕೂಡ ಅರ್ಥೈಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ರಘುನಾಥ್ ತಿಳಿಸಿದರು.
ಶ್ರೀ ಪ್ರಶಾಂತ್ ಶಿವಣ್ಣ ಅವರು ಪುಸ್ತಕದ ಪರಿಚಯ ಮಾಡಿಕೊಟ್ಟರು. ವಿಜಯವಿಠಲ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ವಾಸುದೇವ ಭಟ್ ಪುಸ್ತಕ ಬಿಡುಗಡೆಗೊಳಿಸಿದರು.
‘ಹಿಂದುತ್ವ’ ಪುಸ್ತಕವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕರಾದ ಮೋಹನ್ ಜೀ ಭಾಗವತ್, ಸಹ ಸರಕಾರ್ಯವಾಹರಾದ ಅರುಣ್ ಕುಮಾರ್, ಸುರೇಶ್ ಸೋನಿ ಅವರ ಮಹತ್ವಪೂರ್ಣ ಲೇಖನಗಳನ್ನು ಒಳಗೊಂಡಿದೆ.

