ಮೈಸೂರು: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಕ್ಕಳು ಮೊಬೈಲ್ ಗಳಿಂದ ಪ್ರಭಾವಿತರಾಗಿದ್ದು, ಸದಾ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುತ್ತಾರೆ.
ಇದೇ ಪರಿಕಲ್ಪನೆಯಲ್ಲಿ ಡೋಂಟ್ ಬಿ ಅಡಿಕ್ಟೆಡ್ ಎಂಬ ಶೀರ್ಷಿಕೆಯಲ್ಲಿ ನಂಜನಗೂಡು ತಾಲ್ಲೂಕಿನ ಶ್ವೇತಾ ಟಿ.ಡಿ ಅವರು ಚಿತ್ರ ಬಿಡಿಸಿ ಗಮನ ಸೆಳೆದರು.
ಸರ್ಕಾರದ ಗೃಹ ಜ್ಯೋತಿ ಯೋಜನೆಯಿಂದ ಸಾಕಷ್ಟು ಮನೆಗಳಲ್ಲಿ ದೀಪ ಬೆಳಗಿದೆ ಎಂಬ ನಿಟ್ಟಿನಲ್ಲಿ ಮೈಸೂರಿನ ಸ್ಪಂದನ ಅವರು ಮಹಿಳೆ ಮತ್ತು ದೀಪದ ರಂಗೋಲಿಯನ್ನು ಚಿತ್ತಾಕರ್ಷಕವಾಗಿ ಬಿಡಿಸಿದ್ದರು.ಇದೆಲ್ಲಾ ಕಂಡು ಬಂದದ್ದು ದಸರಾ ಸಂದರ್ಭದಲ್ಲಿ.
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಮಹಿಳಾ ದಸರಾ ಉಪಸಮಿತಿ ವತಿಯಿಂದ ಅಂಬಾ ವಿಲಾಸ ಅರಮನೆ ಮುಂಭಾಗ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮೂಡಿಬಂದ ರಂಗೋಲಿಗಳಿವು
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ತಮ್ಮದೇ ಆದ ವಿಭಿನ್ನ ಕಲ್ಪನೆಯಲ್ಲಿ ರಂಗೋಲಿಗಳನ್ನು ಬಿಡಿಸುವ ಮೂಲಕ ಅತ್ಯುತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ದಸರಾ ಅಂಗವಾಗಿ ಹುಲಿ ಮೇಲೆ ಕುಳಿತ ಚಾಮುಂಡೇಶ್ವರಿ ತಾಯಿಯನ್ನು ತುಮಕೂರಿನ ನಿರ್ಮಲಾ ಅವರು ಬಿಡಿಸುವ ಮೂಲಕ ಸ್ಪರ್ಧೆಗೆ ಜೀವ ತುಂಬಿದರು.
ದುರ್ಗಾ ದೇವಿ ಮತ್ತು ದೇವಿಗೆ ಕಾವಲಾಗಿರುವ ಆನೆಯ ಚಿತ್ರವನ್ನು ಸಿಂಧೂ ಲಕ್ದ್ಮಿ ಅವರು ಬಿಡಿಸಿದರೆ, ಹೆಣ್ಣಾಗಿ ಹುಟ್ಟಿರುವುದಕ್ಕೆ ನಾವೆಲ್ಲಾ ಹೆಮ್ಮೆ ಪಡೋಣ ಎಂಬ ಪರಿಕಲ್ಪನೆಯಲ್ಲಿ ದಾವಣಗೆರೆಯ ಲಕ್ಷ್ಮಿ ಅವರು ಚಿತ್ತಾರದ ರಂಗೋಲಿ ಬಿಡಿಸಿದರು.
ನಂದಿ ಮತ್ತು ಶಿವಲಿಂಗವನ್ನು ವಿಜಯನಗರದ ಸುನಿತಾ ಅವರು ಬಿಡಿಸಿದ್ದರು.
ಚುಕ್ಕಿ ಲೆಕ್ಕಾಚಾರ ಒಂದೆಡೆಯಾದರೆ ಯಾವ ಗೆರೆಗೆ ಎಲ್ಲಿಂದ ಗೆರೆ ಹಾಕಬೇಕು, ಯಾವ ಹೂವಿಗೆ ಯಾವ ಬಣ್ಣ ತುಂಬಬೇಕು ಎಂಬ ನಾನಾ ಬಗೆಯ ಕುತೂಹಲದೊಂದಿಗೆ ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು ತಾವು ಬಿಡಿಸುವ ಚಿತ್ತಾರದ ಅಂದ ಹೆಚ್ಚಿಸಲು ಮುಂದಾದರು.
ಚಾಮುಂಡಿ ಬೆಟ್ಟದ ಗೋಪುರ, ಓಂ ನಲ್ಲಿ ಮೂಡಿರುವ ಗಣೇಶ, ಅರಸರ ಲಾಂಛನವಾದ ಗಂಡ ಬೇರುಂಡ, ನವಿಲಿನ ಚಿತ್ರ, ದಸರಾ ಆನೆ, ರಥ, ಬಾಲಕೃಷ್ಣ ಹೀಗೆ ನಾನಾ ರೀತಿಯ ರಂಗೋಲಿಗಳನ್ನು ಈ ಸ್ಪರ್ಧೆಯಲ್ಲಿ ಬಿಡಿಸಲಾಗಿತ್ತು.
ಇದಕ್ಕೂ ಮುನ್ನ ಶಾಸಕರಾದ ಶ್ರೀ ವತ್ಸ ಅವರು ಕುರುಬಾರಹಳ್ಳಿಯ ಕಲಾವಿದ ಪುನೀತ್ ಅವರು ಅರ್ಜುನನ ನೆನಪಿನಲ್ಲಿ ಮೂಡಿಸಿದ್ದ ಅರ್ಜುನ ಆನೆಗೆ ಪುಷ್ಪಾರ್ಚನೆ ಸಲ್ಲಿಸಿ ರಂಗೋಲಿ ಸ್ಪರ್ಧೆಯನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಮಹಿಳಾ ದಸರಾ ಉಪ ಸಮಿತಿಯಿಂದ ಆಯೋಜಿಸಲಾಗಿರುವ ರಂಗೋಲಿ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಸುಮಾರು150ಕ್ಕೂ ಹೆಚ್ಚು ಮಹಿಳೆಯರು ಆಸಕ್ತಿ ಯಿಂದ ಪಾಲ್ಗೊಂಡಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸಿ ದರು.
ದಸರಾ ಮಹೋತ್ಸವದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ರಂಗೋಲಿ ಸ್ಪರ್ಧೆಯಿಂದ ನಾಡಹಬ್ಬ ದಸರಾಗೆ ಮತ್ತಷ್ಟು ಕಳೆಕಟ್ಟಿದೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಸಮಿತಿ ಉಪ ವಿಶೇಷಾಧಿಕಾರಿ ಬಿ.ಎಂ.ಸವಿತ, ಕಾರ್ಯಾಧ್ಯಕ್ಷ ಬಿ.ಬಸವರಾಜು, ತೀರ್ಪುಗಾರರಾದ ಮೀನಾಕ್ಷಿ ರವಿಕುಮಾರ್, ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾಧ್ಯಕ್ಷೆ ಪ್ರೇಮಕುಮಾರಿ, ದಸರಾ ಉಪಸಮಿತಿ ಕಾರ್ಯದರ್ಶಿ ಚರಿತಾ ಮತ್ತು ಸಮಿತಿ ಸದಸ್ಯರು ಹಾಜರಿದ್ದರು.

