ಮೈಸೂರು: ನಮ್ಮ ಪರಂಪರೆ ಮತ್ತು ಪಾರಂಪರಿಕ ಕಟ್ಟಡಗಳನ್ನು ಕಾಪಾಡುವ ಹಕ್ಕು ನಮ್ಮದಾಗಿದ್ದು, ಹಕ್ಕುಗಳ ಜೊತೆಯಲ್ಲಿ ಪಾರಂಪರಿಕ ಕಟ್ಟಡಗಳನ್ನು ರಕ್ಷಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಸೆಲ್ವಪಿಳ್ಳೆ ಅಯ್ಯಂಗಾರ್ ಕರೆ ನೀಡಿದರು.
ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಗರದ ರಂಗಾಚಾರ್ಲು ಪುರಭವನ ಆವರಣದಲ್ಲಿ ಆಯೋಜಿಸಲಾಗಿದ್ದ ಪಾರಂಪರಿಕ ನಡಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪುರಭವನಕ್ಕೆ ನಿಯೋ ಕ್ಲಾಸಿಕಲ್ ಸ್ಟೈಲ್ ಎಂಬ ಮತ್ತೊಂದು ಹೆಸರಿದ್ದು,1884ರಲ್ಲಿ ರಂಗಚಾರ್ಲು ಅವರು ದಿವಾನರಾಗಿದ್ದ ಸಂದರ್ಭದಲ್ಲಿ ಕಟ್ಟಿಸಲಾಗಿದೆ, ಈ ಕಟ್ಟಡ ವಿಶೇಷತೆಯಿಂದ ಕೂಡಿದೆ, ಸಿಮೆಂಟ್ ಬಳಸದೇ ಕಟ್ಟಿರುವುದು ವಿಶೇಷ ಎಂದು ಬಣ್ಣಿಸಿದರು.
ರಂಗಚಾರ್ಲು ಅವರು ಬ್ರಿಟಿಷ್ ಸರ್ಕಾರದಲ್ಲಿ ಆಗುತ್ತಿದ್ದ ಭ್ರಷ್ಟಚಾರ ಕಂಡು ಹಿಡಿದು ಅದರ ಕುರಿತು ಪುಸ್ತಕ ಬಿಡುಗಡೆ ಮಾಡಿದ್ದರು. ಆ ಸಂದರ್ಭದಲ್ಲಿ ಇವರನ್ನು ಮೈಸೂರಿನ ದಿವಾನರನ್ನಾಗಿ ಮಾಡಲಾಗಿತ್ತು, ನಮ್ಮಲ್ಲಿರುವ ಎಲ್ಲಾ ಕಟ್ಟಡಗಳು 1880ರಿಂದೀಚೆಗೆ ಕಟ್ಟಿಸಲಾಗಿದ್ದು, ಅವುಗಳ ಸಂರಕ್ಷಣೆ ನಮ್ಮೆಲ್ಲರದ್ದಾ ಗಿದೆ ಎಂದು ತಿಳಿಹೇಳಿದರು.
ಮೈಸೂರು ನಗರ ಪಾಲಿಕೆ ಆಯುಕ್ತರಾದ ಶೇಖ್ ತನ್ವೀರ್ ಆಸೀಫ್ ಅವರು ಪಾರಂಪರಿಕ ನಡಿಗೆಗೆ ಹಸಿರು ನಿಶಾನೆ ತೋರಿದರು.
ಪ್ರಾಚೀನ ಸ್ಮಾರಕಗಳು ಇತಿಹಾಸದ ಪಠ್ಯ ಪುಸ್ತಕ, ಕಲಾಕೃತಿಗಳ ಕಳ್ಳ ಸಾಗಾಣಿಕೆ ದೇಶ ದ್ರೋಹ, ಶಿಲ್ಪಗಳಿಗೆ ಸುಣ್ಣ ಅಥವಾ ಎಣ್ಣೆಯನ್ನು ಹಚ್ಚುವುದು ತಪ್ಪು, ಅದರಿಂದ ಅವುಗಳ ಮೂಲ ಸ್ವರೂಪ ಹಾಳಾಗುವುದು ಎಂಬುದರ ಬಗ್ಗೆ ಪಾರಂಪರಿಕ ನಡಿಗೆಯಲ್ಲಿ ಅರಿವು ಮೂಡಿಸಲಾಯಿತು.
ಪ್ರಾಚೀನ ಸ್ಮಾರಕಗಳು ನಾಡಿನ ಸಂಪತ್ತು, ಅವುಗಳನ್ನು ಅಂದಗೆಡಿಸಬೇಡಿ, ಇವುಗಳು ಜೂಜುಕಟ್ಟೆಯಲ್ಲ, ನಾಡಿನ ಸಾಂಸ್ಕೃತಿಕ ಸಂಪತ್ತು. ಇವುಗಳನ್ನು ರಕ್ಷಿಸಿ, ಕಲಾ ದೇಗುಲಗಳು ನಮ್ಮ ನಾಡಿನ ಆಸ್ತಿ-ಅವುಗಳ ಸಂರಕ್ಷಣೆ ಸರ್ಕಾರದ ಕೆಲಸ ಮಾತ್ರವಲ್ಲ ನಮ್ಮೆಲ್ಲರ ಕರ್ತವ್ಯ.. ಹೀಗೆ ಪಾರಂಪರಿಕ ಆಸ್ತಿಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕರನ ಕರ್ತವ್ಯವು ಆಗಿರುತ್ತದೆ ಎಂಬ ಘೋಷವಾಕ್ಯಗಳು ಪಾರಂಪರಿಕ ನಡಿಗೆಯಲ್ಲಿ ಕೇಳಿ ಬಂದವು.
ಪಾರಂಪರಿಕ ಕಟ್ಟಡಗಳು, ದೇಗುಲಗಳು, ಮಸೀದಿಗಳು ಎಲ್ಲವೂ ಸಹ ರಾಜ ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಇಂದಿಗೂ ಅವುಗಳು ಇತಿಹಾಸದ ಗುರುತನ್ನು ಸಾರುತ್ತವೆ. ಆದ್ದರಿಂದ ಅವುಗಳ ಸಂರಕ್ಷಣೆ ನಮ್ಮೆಲ್ಲರ ಹಕ್ಕು ಎಂದು ಮನವರಿಕೆ ಮಾಡಿಕೊಡಲಾಯಿತು.
ಪಾರಂಪರಿಕ ನಡಿಗೆಯು ಪುರಭವನದಿಂದ ಸಾಗಿ, ದೊಡ್ಡ ಗಡಿಯಾರ, ಹತ್ತನೇ ಚಾಮರಾಜ ಒಡೆಯರ್ ವೃತ್ತ, ಅಂಬಾ ವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕಗಡಿಯಾರ, ದೇವರಾಜ ಮಾರುಕಟ್ಟೆ ರಸ್ತೆ, ಕೃಷ್ಣರಾಜೇಂದ್ರ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಕಾಲೇಜು ಮೂಲಕ ಹಾದು, ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟ್ಯೂಟ್ ಮುಖೇನಾ ಕಾವೇರಿ ಎಂಪೋರಿಯಂ ಮತ್ತು ಗಾಂಧಿ ವೃತ್ತದಿಂದ ಮರಳಿ ಪುರಭವನ ತಲುಪಿತು.
ಈ ನಡಿಗೆಯಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತರಾದ ದೇವರಾಜು,
ಮಾನಸ ಗಂಗೋತ್ರಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಿವೃತ್ತ ಪ್ರೊಫೆಸರ್
ಡಾ.ಎನ್.ಎಸ್.ರಂಗರಾಜು, ಉಪ ನಿರ್ದೇಶಕಿ ಡಾ.ಸಿ.ಎನ್. ಮಂಜುಳಾ, ತಾರಕೇಶ್, ಅಂಬರೀಶ್ ಮತ್ತಿತರರು ಪಾಲ್ಗೊಂಡಿದ್ದರು.

