ಮೈಸೂರು: ಗ್ರಾಮಾಂತರ ಪ್ರದೇಶದ ಬಡವರು,ಮಧ್ಯಮ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಶಾಲೆಗಳಿಗೆ ಮೂಲ ಸೌಕರ್ಯ ನೀಡಿದರೆ ಹಾಜರಾತಿ ಪ್ರಮಾಣ ಹೆಚ್ಚಾಗಲಿದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡುವಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮೈಸೂರು ತಾಲ್ಲೂಕಿನ ಮಂಡಕಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಮತ್ತು ಮಯೂರಿ ಸಹಯೋಗದಲ್ಲಿ ಆಯೋಜಿಸಿದ್ದ ನೂತನ ಶೌಚಾಲಯ ಕಟ್ಟಡ ಹಾಗೂ ಗ್ರಂಥಾಲಯ ಕಟ್ಟಡದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಡವರ ಮಕ್ಕಳು ಶಿಕ್ಷಣ ಕಲಿಯಲು ಹೆಚ್ಚಾಗಿ ಬರುತ್ತಾರೆ. ಬಡವರು,ಹಿಂದುಳಿದ, ಶೋಷಿತರ ಮಕ್ಕಳು ಶಿಕ್ಷಣ ಕಲಿಯಬೇಕು ಎಂಬ ಆಶಯದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣದ ಮಹತ್ವವನ್ನು ಸಾರಿದರು. ಅಂಬೇಡ್ಕರ್ ಹೇಳಿದಂತೆ ಶಿಕ್ಷಣವೇ ದೊಡ್ಡ ಆಸ್ತಿ ಎನ್ನುವುದನ್ನು ಮರೆಯಬಾರದು ಎಂದು ತಿಳಿಹೇಳಿದರು.
ಹಳ್ಳಿಗಳಲ್ಲಿ ಶಿಕ್ಷಣ ಕಲಿತರೆ ವಿದ್ಯಾವಂತರು, ಪ್ರತಿಭಾವಂತರು, ಉತ್ತಮ ಪ್ರಜೆಗಳಾಗಬಹುದು. ಸಮಾನತೆಯಿಂದ ಇರುವ ಜತೆಗೆ,ಅಸಮಾನತೆಯನ್ನು ನಿವಾರಿಸಿ ಸಮಾನವಾಗಿ ಇರಬಹುದು, ಒಂದು ವೇಳೆ ಶಿಕ್ಷಣ ಸರಿಯಾಗಿ ದೊರೆಯದಿದ್ದರೆ ಸಮಸ್ಯೆ ಯಾಗಲಿದೆ ಎಂದು ಜಿಟಿಡಿ ಅಭಿಪ್ರಾಯ ಪಟ್ಟರು.
ಹಳ್ಳಿಗಳ ಶಾಲೆಗಳಲ್ಲಿ ಬಡವರು,ಶ್ರೀಮಂತರು ಎನ್ನದೆ ಸಮಾನ ಶಿಕ್ಷಣ ದೊರೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣದ ಜತೆಗೆ,ಇಂಗ್ಲಿಷ್ ತರಗತಿ ನಡೆಯ ಲಿದೆ.ಬೇರೆ ಬೇರೆ ಸರ್ಕಾರಿ ಶಾಲೆಗಳು ಮಂಡಕಳ್ಳಿ ಶಾಲೆಯ ಕಡೆಗೆ ನೋಡುವಂತೆ ಮಾದರಿ ಶಾಲೆಯಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ನಮ್ಮ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಗೆ ಶೌಚಾಲಯ ಮತ್ತು ಗ್ರಂಥಾಲಯದ ನಿರ್ವಹಣೆಯ ಹೊಣೆಯನ್ನು ವಹಿಸಲಾಗಿದೆ. ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಶಾಲೆಯನ್ನು ನಿರ್ವಹಣೆ ಮಾಡಲು ಗಮನಹರಿಸಬೇಕು ಎಂದು ಶಾಸಕರು ಹೇಳಿದರು.
ಶಾಲೆಗೆ ಯಾರೂ ದ್ರೋಹ ಮಾಡಬಾರದು. ದೇವಾಲಯ ಇದ್ದಂತೆ. ಪ್ರೀತಿ,ವಿಶ್ವಾಸದಿಂದ ನೋಡಿಕೊಂಡು ಹೋಗಬೇಕು. ಶಾಲೆಯ ಕೊಠಡಿಗೆ ಕಿಡಿಗೇಡಿಗಳು ಕಲ್ಲು ತೂರುತ್ತಾರೆಂದರೆ ಏನರ್ಥ ಅಂತಹವರನ್ನು ನೀವೇ ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ಎಂದು ಗ್ರಾಮದ ಮುಖಂಡರಿಗೆ ಸೂಚಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಅನೇಕ ಗ್ರಾಮಗಳ ಹಿರಿಯ ಮತ್ತು ಪ್ರೌಢಶಾಲೆಗಳಿಗೆ ಸಿಎಸ್‌ಆರ್ ನಿಧಿ,ಲಯನ್ಸ್,ರೋಟರಿ ಸಂಸ್ಥೆಗಳ ಮೂಲಕ ಶಾಲಾ ಕೊಠಡಿ,ಗ್ರಂಥಾಲಯ,ಶೌಚಾಲಯ ಕಟ್ಟಡವನ್ನು ಒದಗಿಸಲಾಗುತ್ತಿದೆ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಎನ್.ಶಾಮರಾವ್, ಕೆ.ಎಲ್.ರಾಜಶೇಖರ್,ಎನ್.ಸುಬ್ರಹ್ಮಣ್ಯ, ಎಂಡಿಡಿಎ ಅಧ್ಯಕ್ಷ ಎಸ್.ಮೂರ್ತಿ, ಜಯಕುಮಾರ್, ಜಯರಾಮು,ವೆಂಕಟೇಶ್, ಎಲ್‌ಸಿಎಂ ನಿಸರ್ಗ ಅಧ್ಯಕ್ಷ ಕುಮಾರ,ಎಲ್‌ಸಿಎಂ ಮಯೂರಿ ಅಧ್ಯಕ್ಷರಾದ ಸುಮಿತ್ರ ಮೂರ್ತಿ ಹಾಜರಿದ್ದರು.

