ಬಾಲಕಿ ಮೇಲೆ ದೌರ್ಜನ್ಯ: ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ

ವಿರಾಜಪೇಟೆ : ಎಂಟು ವರ್ಷದ ಬಾಲಕಿಯನ್ನು ಪುಸಲಾಯಿಸಿ ದೌರ್ಜನ್ಯ ಎಸಗಿದ್ದ 70ರ ವೃದ್ಧನಿಗೆ ವಿರಾಜಪೇಟೆ ನ್ಯಾಯಾಲಯ 20 ವರ್ಷ‌ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಗೋಣಿಕೊಪ್ಪ ಮೈಸೂರಮ್ಮ ಕಾಲೋನಿ ನಿವಾಸಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಪಿ.ಟಿ.ಅಪ್ಪುಕುಟ್ಟಿ(70) ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಗೊಣಿಕೊಪ್ಪ ಮೈಸೂರಮ್ಮ ಕಾಲೋನಿಯಲ್ಲಿ ಮೂವರು ಹೆಣ್ಣು ಮಕ್ಕಳೊಂದಿಗೆ ದಂಪತಿ ವಾಸವಾಗಿದ್ದರು. ಪತಿ ಆಕಾಲಿಕ ಮರಣಕ್ಕೆ ತುತ್ತಾದ ಬಳಿಕ ತಾಯಿ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದರು.

ಹಿರಿಯ ಮಗಳು ವಸತಿ ಶಾಲೆಯಲ್ಲಿ ಹಾಗೂ ಇಬ್ಬರು ಗೋಣಿಕೊಪ್ಪಲಿನ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. 2022 ರ ನ.16ರಂದು ಆರೋಪಿ ಅಪ್ಪುಕುಟ್ಟಿ ಶಾಲೆಯಿಂದ ಮನೆಗೆ ಹಿಂದುರುಗುತ್ತಿದ್ದ 8 ವರ್ಷದ ಬಾಲಕಿಯನ್ನು ತನ್ನ ಅಂಗಡಿಗೆ ಕರೆಯಿಸಿಕೊಂಡು ಸಿಹಿ ತಿನಿಸು ನೀಡಿ ಪುಸಲಾಯಿ ಸಿದ್ದ. ನಂತರ ಸಮೀಪದ ಮನೆಯಲ್ಲಿ ಟಿವಿ ತೋರಿ ಸುವ ಆಸೆ ತೋರಿಸಿ ಕರೆದೊಯ್ದು ದೌರ್ಜನ್ಯ ಎಸಗಿದ್ದ.

ಈ ವಿಚಾರವನ್ನು ಬಾಲಕಿ ತಾಯಿಯ ಬಳಿ ಹೇಳಿದ್ದಾಳೆ, ತಾಯಿ ಗೋಣಿಕೊಪ್ಪಲು ಠಾಣೆಯಲ್ಲಿ ಆರೋಪಿಯ ಮೇಲೆ ಪ್ರಕರಣ ದಾಖಲಿಸಿದ್ದರು. ವಿರಾಜಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಎಸ್. ನಿರಂ ಜನ್ ರಾಜೇ ಅರಸ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದಾಖಸಿದ್ದ ಪ್ರಕರಣವನ್ನು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾ.ಎಸ್.ನಟರಾಜು ಅವರು ಆರೋಪಿಯ ಮೇಲೆ ದಾಖಲಾದ ಪ್ರಕರಣ ಗಳು ಸಾಭಿತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದ್ದಾರೆ.

ಪೋಕ್ಸೋ ಕಾಯ್ದೆಯಡಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿದ್ದು, ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳ ಸಾದಾ ಜೈಲುವಾಸ ಅನುಭವಿಸುವಂತೆ ತೀರ್ಪು ನೀಡಲಾಗಿದೆ.

ಸಂತ್ರಸ್ತೆ ಬಾಲಕಿಗೆ 7 ಲಕ್ಷ ರೂ.ಗಳನ್ನು ಸರ್ಕಾರದಿಂದ ಪರಿಹಾರ ರೂಪದಲ್ಲಿ ಕೊಡುವಂತೆ ಅದೇಶಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಯಾಸೀನ್ ಅಹಮದ್ ವಾದ ಮಂಡಿಸಿದ್ದರು.