ಮೈಸೂರು: ಸರ್ಕಾರಿ ಕಚೇರಿ ಆವರಣ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ನಿರ್ಮಿಸಿ ಹಸು ಸಾಕಾಣಿಕೆ ಮಾಡುತ್ತಿದ್ದ ಮಹಿಳೆಯನ್ನ ಪ್ರಶ್ನಿಸಿದ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಶ್ರೀರಾಂಪುರ ಬಡಾವಣೆಯಲ್ಲಿ ನಡೆದಿದೆ.
ಈ ಘಟನೆ ಅಬ್ದುಲ್ ನಸೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ಸಂಸ್ಥೆಯ ಅಂಗ ಸಂಸ್ಥೆಯಾದ ರಾಜ್ಯ ಸಂಪನ್ಮೂಲ ಕೇಂದ್ರದಲ್ಲಿ ನಡೆದಿದೆ.
ಉಪನಿರ್ದೇಶಕರಾದ ಮನು ಬಿ.ಕೆ.ಅವರ ಮೇಲೆ ತಿರುಮತಿ ಎಂಬುವರು ಹಲ್ಲೆ ಮಾಡಿದ್ದಾರೆ.
ಶ್ರೀರಾಂಪುರದ ರಾಜ್ಯ ಸಂಪನ್ಮೂಲ ಕೇಂದ್ರದ ಕಚೇರಿಯ ಆವರಣದ ಗೋಡೆ ಒತ್ತುವರಿ ಮಾಡಿಕೊಂಡು ಪಾದಚಾರಿ ರಸ್ತೆಯಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಿಸಿ ಹಸುಗಳನ್ನ ಸಾಕಣಿಕೆ ಮಾಡುತ್ತಿದ್ದ ತಿರುಮತಿ ಎಂಬಾಕೆ ಆಗಾಗ ಅಲ್ಲಿನ ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ.
ಹಾಗಾಗಿ ಉಪನಿರ್ದೇಶಕ ಮನು ಅವರು ಕಚೇರಿಗೆ ಭೇಟಿ ನೀಡಿದಾಗ ಶೆಡ್ ಗೂ ಭೇಟಿ ನೀಡಿದ್ದಾರೆ.
ಆಗ ಒಳ ಪ್ರವೇಶಿಸಿದ ತಿರುಮತಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಣ್ಣು ಎರಚಿ ಅನಾಗರೀಕರಂತೆ ವರ್ತಿಸಿದ್ದಾಳೆ.
ಆಕೆಯ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಮನು ಅವರು ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

