ಮೈಸೂರು: ಅಪಘಾತವಾಗಿ ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸುವುದಾಗಿ ನಂಬಿಸಿ ಆತನಿಂದ ಫೋನ್ ಪೇ ಮೂಲಕ 80 ಸಾವಿರ ಹಾಕಿಸಿ ಆಸ್ಪತ್ರೆಗೂ ದಾಖಲಿಸದೆ ಪರಾರಿಯಾಗಿದ್ದ ಇಬ್ಬರು ನೀಚರನ್ನು ಜಿಲ್ಲಾ ಸೈಬರ್ ಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ.
ಮಹದೇವಪುರ ನಿವಾಸಿ ರಮೇಶ್(25) ಹಾಗೂ ರಮಾಬಾಯಿ ನಗರದ ಮನು(25) ಬಂಧಿತ ಆರೋಪಿಗಳು.
ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನ ಬಂಧಿಸುವಲ್ಲಿ ಸೈಬರ್ ಕ್ರೈಮ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ 80 ಸಾವಿರ ಹಾಗೂ ಎರಡು ಮೊಬೈಲ್ ಗಳನ್ನು ಪೊಲೀಸರು ಪಡಿಸಿಕೊಂಡಿದ್ದಾರೆ.
ಡಿ.16 ರಂದು ಗಣೇಶ್ ಎಂಬುವರು ಕಡಕೊಳ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ನಾಯಿ ಅಡ್ಡ ಬಂದು ಆಯತಪ್ಪಿ ಬಿದ್ದು ಪ್ರಜ್ಞಾಹೀನರಾಗಿದ್ದರು.
ಈ ವೇಳೆ ಸ್ಥಳಕ್ಕೆ ಬಂದ ಇಬ್ಬರು ಗಣೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸುವುದಾಗಿ ನಂಬಿಸಿ ಫೋನ್ ಪೇ ಮೂಲಕ 80 ಸಾವಿರ ವರ್ಗಾಯಿಸಿಕೊಂಡು ಆಸ್ಪತ್ರೆಗೆ ದಾಖಲಿಸದೆ ಪರಾರಿಯಾಗಿದ್ದರು.
ಈ ಸಂಬಂಧ ಗಾಯಗೊಂಡ ವ್ಯಕ್ತಿ ಸಹೋದರ ದೂರು ನೀಡಿದ್ದರು.ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ಎಸ್ಪಿ ಎನ್.ವಿಷ್ಣುವರ್ಧನ್,ಅಡಿಷನಲ್ ಎಸ್ಪಿ ಸಿ ಮಲ್ಲಿಕ್ ಹಾಗೂ ಎಲ್ ನಾಗೇಶ್ ಮಾರ್ಗದರ್ಶನದಲ್ಲಿ ಸೈಬರ್ ಠಾಣೆಯ ಡಿವೈಎಸ್ಪಿ ಆರ್.ಶ್ರೀಕಾಂತ್ ಅವರ ನೇತೃತ್ವದಲ್ಲಿ ನಿರೀಕ್ಷಕರಾದ ಸುನಿಲ್,ಎಸ್ಸೈ ಸುರೇಶ್ ಬೋಪಣ್ಣ,ಸಿಬ್ಬಂದಿ ಮಂಜುನಾಥ್,ರಂಗಸ್ವಾಮಿ,ಬಸವರಾಜ್ ಅವರು ಐನಾತಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

