ಮನೆಗೆ‌ ನುಗ್ಗಿ ಮಹಿಳೆ‌ ಮೇಲೆ‌ ಹಲ್ಲೆ‌ ನಡೆಸಿದ‌‌ ಸಂಬಂಧಿಕರು

ಮೈಸೂರು: ಆಸ್ತಿ ವಿವಾದ ಹಿನ್ನಲೆ ಒಂಟಿಯಾಗಿದ್ದ ಮಹಿಳೆ ಮನೆಗೆ ನುಗ್ಗಿ ಸಂಬಂಧಿಕರು ಹಲ್ಲೆ ನಡೆಸಿ ವಸ್ತುಗಳನ್ನ ನಾಶಪಡಿಸಿ ಕೊಲೆ ಬೆದರಿಕೆ ಹಾಕಿದ ಪ್ರಕರಣ ಮೈಸೂರಿನ ಕುಂಬಾರಗೇರಿಯಲ್ಲಿ ನಡೆದಿದೆ.

ನೇತ್ರಾವತಿ ಎಂಬುವರ ಮೇಲೆ ಹಲ್ಲೆ ನಡೆದಿದ್ದು ಪ್ರಸನ್ನ, ಜಗನ್ನಾಥ್, ಮಂಜುಳಾ, ರೇಣುಕಾ, ವರ್ಷಾ ಹಾಗೂ ಪ್ರಜ್ವಲ್ ಎಂಬುವರ ವಿರುದ್ದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಮಾ ಚಿತ್ರಮಂದಿರದ ರಸ್ತೆಯಲ್ಲಿ ನೇತ್ರಾವತಿ ರವರ ಮನೆ ಇದ್ದು ಕಳೆದ 10 ವರ್ಷಗಳಿಂದ ಆಸ್ತಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದೆ.

ಆ ಆಸ್ತಿಯನ್ನ ಮಾರಾಟ ಮಾಡಲು ನೇತ್ರಾವತಿ ಅವರ ಸಂಬಂಧಿಕರೇ ಆದ ಆರೋಪಿಗಳು ಸಾಕಷ್ಟು ವಿಫಲ ಯತ್ನ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ 6 ಜನ ಆರೋಪಿಗಳು 7-8 ಜನರನ್ನ ಮನೆಗೆ ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ. ನಿಮ್ಮಿಂದ ಮನೆ ಮಾರಾಟ ಮಾಡಲು ಸಾಧ್ಯವಾಗಿಲ್ಲ ಎಂದು ಕಾರಣ ನೀಡಿ ಗಂಡ ಇಲ್ಲದಿರುವ ಸಮಯದಲ್ಲಿ ಮನೆಗೆ ಪ್ರವೇಶಿಸಿ ನೇತ್ರಾವತಿ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.

ಗಲಾಟೆ ವೇಳೆ ನೇತ್ರಾವತಿ ರವರ ಮಾಂಗಲ್ಯ ಸರ ಹಾಗೂ ಎರಡು ಉಂಗುರಗಳನ್ನ ಕಿತ್ತುಕೊಂಡು ಹೋಗಿದ್ದಾರೆ. ಮೊಬೈಲ್ ಒಡೆದುಹಾಕಿ ಗೂಂಡಾಗಳಂತೆ ವರ್ತಿಸಿದ್ದಾರೆ. ಮನೆಯಲ್ಲಿದ್ದ ಸಿಸಿ ಕ್ಯಾಮರಾ ಧ್ವಂಸ ಮಾಡಿದ್ದಾರೆ.ಕೆಲವು ವಸ್ತುಗಳನ್ನ ನಾಶಪಡಿಸಿದ್ದಾರೆ.

ಹಲ್ಲೆಗೆ ಒಳಗಾದ ನೇತ್ರಾವತಿ 6 ಮಂದಿ ವಿರುದ್ದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.