ನ್ಯಾಯಾಂಗ ಬಡಾವಣೆ,ಕಾವೇರಿ ನಗರದಲ್ಲಿ ಮುಸುಕುದಾರಿ ದರೋಡೆಕೋರರು!
ಬೆಚ್ಚಿಬಿದ್ದ ಜನತೆ

ಮೈಸೂರು: ಮೈಸೂರಿನ ನ್ಯಾಯಾಂಗ ಬಡಾವಣೆ,ಕಾವೇರಿನಗರ, ದಟ್ಟಗಳ್ಳಿ,ದಾಸನಕೊಪ್ಪಲು ರವಿಶಂಕರ್ ಲೇಔಟ್ ರೂಪಾ ನಗರ ಮತ್ತಿತರೆಡೆ ಗುರುವಾರ ಮಧ್ಯರಾತ್ರಿ ಐದು ಮಂದಿ ಮುಸುಕುದಾರಿ ದರೋಡೆಕೊರರು
ಕೆಲವು ಮನೆಗಳಲ್ಲಿ ದರೋಡೆ ಮಾಡಿ ಹೋಗಿದ್ದು ಈ ಬಡಾವಣೆಗಳ ಜನರು ಬೆಚ್ಚಿಬಿದ್ದಿದ್ದಾರೆ.

ಆದರೆ‌ ಈ ದರೋಡೆ ಬಗ್ಗೆ‌ ತಡವಾಗಿ ಜಯಪುರ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಮುಸುಕು‌ದಾರಿ ದರೋಡೆಕೋರರು ಕೈಗಳಲ್ಲಿ ರಾಡ್ ಹಾಗೂ ಮಚ್ಚುಗಳನ್ನು ಹಿಡಿದು ಅಡ್ಡಾಡಿರುವುದು,ಮನೆಗಳಿಗೆ ನುಗ್ಗಿರುವ ದೃಶ್ಯಾವಳಿಗಳು ಬಡಾವಣೆಗಳಲ್ಲಿನ‌ ಕೆಲವರ ಮನೆಯ‌ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಕಾವೇರಿನಗರದ ಕೆಲವರ ಮನೆಯ ಗೇಟೊಳಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕದ್ದು ಅವುಗಳನ್ನು ಅಲ್ಲೇ ಸಮೀಪದ ಹಳ್ಳದಲ್ಲಿ ಬಿಟ್ಟುಹೋಗಿದ್ದರೆಂದು ಬಡಾವಣೆಯ ಜನರು ಮಾಹಿತಿ ನೀಡಿದ್ದಾರೆ.

ಅಷ್ಟೇ ಏಕೆ ನ್ಯಾಯಾಂಗ ಬಡಾವಣೆ ಸಮೀಪವೇ ಇರುವ ಕ್ರೈಸ್ಟ್ ಪಬ್ಲಿಕ್ ಶಾಲೆಯಲ್ಲೂ ಕೂಡ ದ್ವಿಚಕ್ರವಾಹನ ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಇದನ್ನು ಪೊಲೀಸರೇ ಸ್ಪಷ್ಟಪಡಿಸಬೇಕಿದೆ.

ರೂಪ ನಗರದ ಮನೆ ಒಂದರಲ್ಲಿ ಮನೆಯವರು ಇರಲಿಲ್ಲವೆಂದೂ ಆ ಮನೆಯ ಬಾಗಿಲನ್ನು ಮುರಿದು ಒಳನುಗ್ಗಿದ ದರೋಡೆಕೋರರು ಹಣ ಮತ್ತಿತರ ವಸ್ತುಗಳನ್ನು ದೋಚಿದ್ದಾರೆ ಎಂದು ಗೊತ್ತಾಗಿದೆ.

ಕೂಡಲೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ದರೋಡೆಕೋರರನ್ನು ಶೀಘ್ರ ಹಿಡಿದು ಕಠಿಣ ಶಿಕ್ಷೆ ನೀಡಬೇಕೆಂದು ಬಡಾವಣೆಯ ಜನರು ಆಗ್ರಹಿಸಿದ್ದಾರೆ.

ಈ ಭಾಗದ ಎಲ್ಲಾ ಬಡಾವಣೆಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ ಮಾಡಬೇಕು ರಾತ್ರಿ ಪಹರೆಯನ್ನು ಹೆಚ್ಚಿಸಬೇಕೆಂದು ಜನರು ಪೊಲೀಸ್ ಇಲಾಖೆ ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅಲ್ಲದೆ ಈ ಭಾಗದ ಶಾಸಕರಾದ ಜಿ ಟಿ ದೇವೇಗೌಡರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮೇಲೆ ಒತ್ತಡ ತಂದು ಪೊಲೀಸ್ ಭದ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಬಡಾವಣೆಗಳ ಜನತೆ ಆಗ್ರಹಿಸಿದ್ದಾರೆ.