ಗಾಂಧಿನಗರ: ತವರು ರಾಜ್ಯ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಸೋಮನಾಥ ದೇವಾಲಯದಲ್ಲಿ ವೀಶೇಷ ಪೂಜೆ ಸಲ್ಲಿಸಿ ದೇಶದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಜ್ಯೋತಿರ್ಲಿಂಗಗಳಲ್ಲಿ ಒಂದಾದ ಗುಜರಾತ್‌ನ ಶ್ರೀ ಸೋಮನಾಥ ದೇವಾಲಯದ ಮೇಲೆ 1026 ರ ಜನವರಿಯಲ್ಲಿ ಮಹ್ಮದ್ ಘಜ್ನಿ ಮೊದಲ ಬಾರಿಗೆ ದಾಳಿ ನಡೆಸಿ ಜ.10ಕ್ಕೆ 1,000 ವರ್ಷಗಳು ಕಳೆದಿವೆ.
ಹಾಗಾಗಿ ದೇವಾಲಯದ ಮೇಲೆ ನಡೆದ ಮೊದಲ ದಾಳಿಯ ಸಾವಿರ ವರ್ಷಾಚರಣೆ ಭಾಗವಾಗಿ ʻಸೋಮನಾಥ ಸ್ವಾಭಿಮಾನ ಪರ್ವʼ ಕಾರ್ಯಕ್ರಮ ಆಯೋಜಿಸಲಾಗಿದೆ.
1 ಸಾವಿರ ವರ್ಷಗಳ ನಂತರವೂ ಸೋಮನಾಥ ದೇವಾಲಯದ ಭವ್ಯತೆ ಮರುಸ್ಥಾಪಿಸಲು ನಡೆದ ಹಲವಾರು ಪ್ರಯತ್ನಗಳ ಫಲವಾಗಿ ಈ ದೇವಾಲಯವು ಕಂಗೊಳಿಸುತ್ತಿದೆ.
ಮೋದಿ ಅವರು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮವಾದ ಭಾಗವಾಗಿ ನಡೆಯುತ್ತಿರುವ ಸೋಮನಾಥ ಸ್ವಾಭಿಮಾನ್ ಪರ್ವ್ ಕಾರ್ಯಕ್ರಮಲ್ಲಿ ಪಾಲ್ಗೊಂಡು ಸೋಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ದೇವಾಲಯದಲ್ಲಿ ನಡೆದ ‘ಓಂಕಾರ ಮಂತ್ರ’ ಪಠಣದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.
ಪ್ರಾರ್ಥನೆ ಸಲ್ಲಿಕೆ ಬಳಿಕ ಪ್ರಧಾನಿ ಮೋದಿ ಶ್ರೀ ಸೋಮನಾಥ ಟ್ರಸ್ಟ್‌ನ ಸಭೆಯಲ್ಲಿ ಪಾಲ್ಗೊಂಡು, ದೇವಾಲಯ ಸಂಕೀರ್ಣದಲ್ಲಿನ ಮೂಲಸೌಕರ್ಯಗಳನ್ನ ಮೇಲ್ದರ್ಜೆಗೇರಿಸುವುದು, ಸೋಮನಾಥ ತೀರ್ಥಯಾತ್ರೆಯನ್ನ ಇನ್ನಷ್ಟು ಸ್ಮರಣೀಯವಾಗಿಸುವುದು ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಿದರು.
ನಂತರ ಭಾರತದ ಪ್ರಾಚೀನತೆ ಬಿಂಬಿಸುವ ವೀಶೇಷ ಡ್ರೋನ್ ಶೋ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ ಈ ಬೆಳಕಿನ ಕಿರಣವು ಭಾರತದ ಸಾಂಸ್ಕೃತಿಕ ಶಕ್ತಿಯ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರುತ್ತದೆ ಎಂದು ಶ್ಲಾಘಿಸಿದರು.

