ಮೈಸೂರು: ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಮೈಸೂರು ತಾಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಬೆಳವಾಡಿ ಹಾಗೂ ಕಡಕೊಳ ಬಳಿ ಅಪಘಾತಗಳು ನಡೆದಿದೆ.
ಮೊದಲನೇ ಘಟನೆಯಲ್ಲಿ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಕಡಕೊಳ ನಿವಾಸಿ ನಂಜನಾಯಕ ಎಂಬವರು ಮೃತಪಟ್ಟಿದ್ದಾರೆ.
ಬ್ರೆಡ್ ತರಲೆಂದು ಬೇಕರಿಗೆ ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ.
ಅನಾರೋಗ್ಯಕ್ಕೀಡಾಗಿದ್ದ ನಂಜನಾಯಕ ಅವರು ರಾತ್ರಿ 9 ಗಂಟೆ ವೇಳೆಯಲ್ಲಿ ಬ್ರೆಡ್ ತರಲೆಂದು ಕಡಕೊಳದ ಬೇಕರಿ ಬಳಿಗೆ ತೆರಳಿದ್ದರು.ಆಗ ನಂಜನಗೂಡು ಕಡೆಯಿಂದ ಬಂದ ಟಿಟಿ ವಾಹನ ಅವರಿಗೆ ಡಿಕ್ಕಿ ಹೊಡೆದಿದ್ದು, ಸ್ಥಳೀಯರು ಅವರನ್ನು ಕೆಆರ್ ಆಸ್ಪತ್ರೆಗೆ ಕರೆತಂದ್ದಾರೆ,ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿ ದ್ದರು. ಈ ಸಂಬಂಧ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣ ಸ್ವಯಂ ಅಪಘಾತದಲ್ಲಿ ಮಧ್ಯಪ್ರದೇಶ ಮೂಲದ ರವಿಕಾಂತ್ ಎಂಬವರು ಮೃತಪಟ್ಟಿದ್ದಾರೆ.
ಖಾಸಗಿ ಕಾರ್ಖಾನೆ ಉದ್ಯೋಗಿಯಾಗಿದ್ದ ಅವರು, ಲಿಂಗದೇವರಕೊಪ್ಪಲಿನಲ್ಲಿ ವಾಸವಿದ್ದರು.
ಕ್ರಿಕೆಟ್ ಆಡುವ ಸಲುವಾಗಿ ಬೆಳವಾಡಿಯ ಮೈದಾನಕ್ಕೆ ಹೋಗಿದ್ದರು, ನೀರು ಕುಡಿಯುವ ಸಲುವಾಗಿ ಬೈಕ್‌ನಲ್ಲಿ ಮನೆಗೆ ತೆರಳಿದ್ದರು. ಈ ವೇಳೆ ತಿರುವಿನಲ್ಲಿ ಬೈಕ್ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ.
ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯ ಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಾಹನದ ಹಿಂಬದಿ ಕುಳಿತಿದ್ದ ದೀಪು ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

