ಹಾಡಹಗಲೆ ಹುಣಸೂರಿನಲ್ಲಿ ನಡೆದ ಚಿನ್ನ,ವಜ್ರ ದರೋಡೆ: ಬಿಹಾರದ ಇಬ್ಬರು ಅರೆಸ್ಟ್

ಮೈಸೂರು: ಹುಣಸೂರು ಪಟ್ಟಣದಲ್ಲಿ ಹಾಡಹಗಲೆ ಚಿನ್ನ ದರೋಡೆ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು ಇದೀಗ ಬಿಹಾರದಲ್ಲಿ ಅಡಗಿದ್ದ ಇಬ್ಬರು‌ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಿಹಾರ ರಾಜ್ಯದ ಭಾಗಲ್ಪುರ ಜಿಲ್ಲೆಯ ಪಂಕಜ್ ಕುಮಾರ್ ಮತ್ತು ದರ್ಭಾಂಗ ಜಿಲ್ಲೆಯ ಹೃಷಿಕೇಶ್ ಸಿಂಗ್ ಬಂಧಿತ ಆರೋಪಿಗಳು.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್ ಪಿ ಮಲ್ಲಿಕಾರ್ಜುನ ಬಾಲ ದಂಡಿ ಅವರು,ಆರೋಪಿಗಳನ್ನು ಬಿಹಾರದ ಎಸ್ ಟಿಎಫ್ ತಂಡ ಮತ್ತು ಕರ್ನಾಟಕ ಪೊಲೀಸ್ ತಂಡದ ಸಹಯೋಗದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.

ಬಂಧಿತರಿಂದ ಒಂದು ಚಿನ್ನದ ಸರ, ಒಂದು ಉಂಗುರ, ಒಂದು ಲಕ್ಷ ರೂ.ನಗದು, ಒಂದು ಮೋಟಾರ್ ಸೈಕಲ್ ಮತ್ತು ಒಂದು ಚಿನ್ನಾಭರಣ ಇಡುವ ಸ್ಟೋರೇಜ್ ಕೇಸ್ ವಶಕ್ಕೆ ಪಡೆಯಲಾಗಿದೆ,ಆದರೆ ದರೋಡೆಕೋರರು 8 ಕೆಜಿ ಚಿನ್ನಾಭರಣ ದರೋಡೆ ಮಾಡಿದ್ದರು ಅದನ್ನೆಲ್ಲ ಇನ್ನೂ ರಿಕವರಿ ಮಾಡಬೇಕಿದೆ‌‌ ಎಂದು ಮಾಹಿತಿ ನೀಡಿದರು.

16 ವಿವಿಧ ಪ್ರಕರಣಗಳು ಆರೋಪಿ ಪಂಕಜ್ ಕುಮಾರ್ ಬಿಹಾರ ಪೊಲೀಸರಿಗೆ ಬೇಕಿದ್ದ ಮುಖ್ಯ ಆರೋಪಿಯಾಗಿದ್ದಾನೆ, ಈತನ ವಿರುದ್ಧ ಬಿಹಾರ, ಜಾರ್ಖಂಡ್, ಕರ್ನಾಟಕ ಮತ್ತು ರಾಜಾಸ್ತಾನ ರಾಜ್ಯದಲ್ಲಿ ಕೊಲೆಯತ್ನ, ಡಕಾಯಿತಿ, ದರೋಡೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಹಲವು ಪ್ರಕರಣ‌ಗಳಿವೆ.

ಮತ್ತೊಬ್ಬ ಆರೋಪಿ ಹೃಷಿಕೇಶ್ ಸಿಂಗ್ ವಿರುದ್ಧವೂ ನಾಲ್ಕು ಕ್ರಿಮಿನಲ್ ಕೇಸ್‌ಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ಇವೆ ಬಿಹಾರ ಮತ್ತು ಕರ್ನಾಟಕ ಪೊಲೀಸರು ಬಿಹಾರದ ಭಾಗಲ್ಪುರ ಮತ್ತು ದರ್ಭಾಂಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಶುಕ್ರವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ,ಉಳಿದ ಆರೋಪಿಗಳನ್ನು ಶೀಘ್ರವೆ ಬಂಧಿಸಲಾಗುವುದು ಎಂದು ಎಸ್ ಪಿ ಮಲ್ಲಿಕಾರ್ಜುನ ಬಾಲ ದಂಡಿ
ತಿಳಿಸಿದರು.

ಡಿ.28ರ ಭಾನುವಾರ ಹುಣಸೂರು ನಗರದ ಬೈಪಾಸ್ ರಸ್ತೆಯಿಂದ ಬಸ್‌ನಿಲ್ದಾಣದ ಮಾರ್ಗದಲ್ಲಿ ನಿಲ್ದಾಣದ ಕೂಗಳತೆ ದೂರದಲ್ಲಿರುವ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಜ್ಯುವೆಲರಿ ಮಳಿಗೆಯಲ್ಲಿ ಮಧ್ಯಾಹ್ನ 2ಗಂಟೆ 4 ನಿಮಿಷಕ್ಕೆ ಬೈಕಿನಲ್ಲಿ ಐದು ಮಂದಿ ಮಸುಕುಧಾರಿ ದರೋಡೆಕೋರರು ನುಗ್ಗಿ ಕೇವಲ 6 ನಿಮಿಷಗಳಲ್ಲಿ 10 ಕೋಟಿ ರೂ.ಮೌಲ್ಯದ 8 ಕೆಜಿ ತೂಕದ ಚಿನ್ನ ಮತ್ತು ವಜ್ರದ ಆಭರಣಗಳನ್ನು ದರೋಡೆ ಮಾಡಿ ರಾಜಾರೋಷವಾಗಿ ಬೈಕುಗಳಲ್ಲಿ ಪರಾರಿಯಾಗಿದ್ದರು.

ಸಿನಿಮೀಯ ರೀತಿಯಲ್ಲಿ ನಡೆದಿದ್ದ ಘಟನೆಗೆ ಇಡೀ ಜಿಲ್ಲೆಯ‌‌ ಜನ ಬೆಚ್ಚಿಬಿದ್ದಿದ್ದರು.

ಇಬ್ಬರು ಡಿವೈಎಸ್‌ಪಿ ಸೇರಿದಂತೆ 100ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವಿಧ ರೀತಿಯಲ್ಲಿ ತನಿಖೆ ಕಾರ್ಯ ನಡೆಸುತ್ತಿದ್ದರು. 5 ತಂಡಗಳನ್ನು ರಚಿಸಿ ತನಿಖೆ ಮುಂದುವರೆಸಲಾಗಿತ್ತು.

ಹುಣಸೂರು ಹೊರವಲಯ ಹಾಲಗೆರೆ ಜಂಕ್ಷನ್ ಬಳಿ ದರೋಡೆಕೋರರು ಬೈಕಿನಲ್ಲಿ ಸಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಘಟನೆ ನಡೆದು 20 ದಿನಗಳೇ ಕಳೆದರೂ ದರೋಡೆಕೋರರ ಸುಳಿವು ಸಿಕ್ಕದಿರುವುದು ನಾಗರಿಕರನ್ನು ಆತಂಕಕ್ಕೆ ಎಡೆ ಮಾಡಿತ್ತು. ಇದೀಗ ಇಬ್ಬರು ದರೋಡೆಕೋರರನ್ನು ಬಂಧಿಸಿರುವುದರಿಂದ ನಾಗರಿಕರು ನಿಟ್ಟುಸಿರುಬಿಟ್ಟಿದ್ದಾರೆ.