ಮೈಸೂರು ನಗರ ಪಾಲಿಕೆಯಲ್ಲಿ ಅಕ್ರಮಗಳ ಏರಿಕೆ;ರಾಜ್ಯ ಸರ್ಕಾರ ಹೊಣೆ: ಯದುವೀರ್

ಮೈಸೂರು: ಮೈಸೂರು ನಗರಪಾಲಿಕೆ ಈಗ ಅವ್ಯವಸ್ಥೆಗಳ ಆಗರವಾಗಿದೆ. ಉತ್ತರದಾಯಿತ್ವ ಇಲ್ಲದೇ ಅಕ್ರಮಗಳ ಸಂಖ್ಯೆ ಏರಿಕೆಯಾಗಿದೆ ಇದಕ್ಕೆ ಕಾಂಗ್ರೆಸ್‌ ಸರ್ಕಾರವೇ ಸಂಪೂರ್ಣ ಹೊಣೆ ಎಂದು ಸಂಸದ ಯದುವೀರ್‌ ಒಡೆಯರ್‌ ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಯದುವೀರ ಕೃಷ್ಣದತ್ತ ಚಾಮರಸಜ ಒಡೆಯರ್, ನಗರ ಪಾಲಿಕೆಯಲ್ಲಿ ಸಾರ್ವಜನಿಕ ನಿಧಿಯನ್ನೇ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಮೂವರು ಮಹಿಳಾ ಸಿಬ್ಬಂದಿಯನ್ನು ಅಮಾನತು ಮಾಡಿರುವುದು ಇದಕ್ಕೆ ಸಾಕ್ಷಿ ಎಂದು ಕಿಡಿಕಾರಿದ್ದಾರೆ.

ಚುನಾಯಿತ ಕಾರ್ಪೊರೇಟರ್‌ಗಳು ಇಲ್ಲದಿರುವುದು, ಸಮರ್ಥ ಮೇಲ್ವಿಚಾರಣೆ ಮಾಡದಿರುವುದು, ಸುಧಾರಣೆ ಕ್ರಮಗಳನ್ನು ಕೈಗೊಳ್ಳದಿರುವುದು, ಉತ್ತರದಾಯಿತ್ವ ಇರದಿರುವುದು ಇಂತಹ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದೇ ವಿಳಂಬ ಧೋರಣೆ ತೋರುತ್ತಿರುವುದು ಎಲ್ಲದ್ದಕ್ಕೂ ಕಾರಣವಾಗಿದೆ ಎಂದು ಸಂಸದರು ತಿಳಿಸಿದ್ದಾರೆ.

ಸ್ಥಳೀಯ ಪ್ರಜಾಪ್ರಭುತ್ವ ಹಾದಿ ತಪ್ಪಿದಾಗ, ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗುತ್ತದೆ. ಒಟ್ಟಾರೆ ಎಲ್ಲ ಪ್ರಕರಣ ಗಳಿಗೂ ಕಾಂಗ್ರೆಸ್ ಸರ್ಕಾರವೇ ಸಂಪೂರ್ಣ ಹೊಣೆ ಯಾಗಿದೆ ಎಂದು ಯದುವೀರ್‌ ಆರೋಪಿಸಿ ದ್ದಾರೆ.

ಗ್ರೇಟರ್‌ ಮೈಸೂರು ಮಾಡುತ್ತೇವೆ ಎಂದು ಹೊರಟಿರುವ ಕಾಂಗ್ರೆಸ್‌ ಸರ್ಕಾರ, ಅದನ್ನು ಮಾಡದಿದ್ದರೂ ಪರವಾಗಿಲ್ಲ, ನಗರಪಾಲಿಕೆಯಲ್ಲಿ ಗ್ರೇಟರ್‌ ಸುಧಾರಣೆಗಳನ್ನು ಮಾಡಿದರೆ ಸಾಕು ಎಂದು ಸಂಸದ ಯದುವೀರ್‌ ಒಡೆಯರ್‌ ಟಾಂಗ್ ನೀಡಿದ್ದಾರೆ.