ಮೈಸೂರು: ಮೈಸೂರಿನ ದೇವರಾಜ ಮೊಹಲ್ಲಾದಲ್ಲಿರುವ ಶತಮಾನದ ದೇವರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಕುಸಿದು ಬೀಳುತ್ತಿದೆ.
೧೮೯೦ರಲ್ಲಿ ಸ್ಥಾಪಿತವಾದ ಈ ಶಾಲೆ ೧೩೬ನೇ ವರ್ಷಕ್ಕೆ ಕಾಲಿಟ್ಟಿದೆ.ಈ ಶಾಲೆಯಲ್ಲಿ ೧ರಿಂದ ೭ನೇ ತರಗತಿಯವರೆಗೆ ೩೬ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಆತಂಕದಲ್ಲೇ ಪಾಠಪ್ರವಚನ ಕೇಳಬೇಕಿದೆ.
ಹಿಂದೆ ಮಕ್ಕಳ ಸಂಖ್ಯೆ ೪೦೦ಕ್ಕಿಂತ ಹೆಚ್ಚೂ ಇತ್ತು ಎಂಬುದಕ್ಕೆ ಈ ಶಾಲೆಯ ದಾಖಲೆಗಳು ಸಾಕ್ಷಿ ಇದೆ. ಪ್ರಸ್ತುತ ಈ ಶಾಲೆಯಲ್ಲಿ ಮೂವರು ಶಿಕ್ಷಕಿಯರಿದ್ದು, ಒಬ್ಬರಿಗೆ ಪ್ರಭಾರ ಮುಖ್ಯೋಪಾಧ್ಯಾಯರ ಜವಾಬ್ದಾರಿ ವಹಿಸಿಕೊಡಲಾಗಿದೆ.
ಒಂದೇ ಕೊಠಡಿಯಲ್ಲಿ ೩೬ ಮಕ್ಕಳಿಗೂ ಪಾಠ ಹೇಳುತ್ತಿರುವುದು ದುರ್ದೈವದ ಸಂಗತಿ. ಒಂದೇ ಕೊಠಡಿಯಲ್ಲಿ ಆ ಕಡೆ ಒಬ್ಬರು ಶಿಕ್ಷಕರು, ಈ ಕಡೆ ಒಬ್ಬರು ಶಿಕ್ಷಕರು ಪಾಠ ಹೇಳಬೇಕಿದೆ, ಇದು ಮಕ್ಕಳ ಕಲಿಕೆ ಹಾಗೂ ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಯಾಗಿದೆ.
ಈ ಕೊಠಡಿಯ ಪಕ್ಕದಲ್ಲಿ ಕಗ್ಗತ್ತಲು ತುಂಬಿರುವ ಚಿಕ್ಕ ಕೋಣೆಯಲ್ಲಿ ನಾನಾ ತರಹದ ವಸ್ತುಗಳನ್ನು ದಾಸ್ತಾನಿಟ್ಟಿದ್ದ ಡಸ್ಟ್ಬಿನ್ ಆಗಿಬಿಟ್ಟಿದೆ.
ಶಾಲೆಯಲ್ಲಿ ಮಕ್ಕಳಿಗೆ ಕೂರಲು ಸಾಕಷ್ಟು ಬೆಂಚ್ ಇಲ್ಲ. ಜಮಖಾನದ ಮೇಲೆ ಕೂರುತ್ತಾರೆ. ಕಂಪ್ಯೂಟರ್‌ಗಳ ಸೌಲಭ್ಯ ಆಗಲಿ, ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆಯನ್ನಾಗಲಿ ಕಲ್ಪಿಸಲೂ ಸಾಧ್ಯವಾಗದ ಸ್ಥಿತಿ ಇದೆ.
ಮಕ್ಕಳ ಆಟೋಟಕ್ಕೆ ಮೈದಾನ ಕೂಡಾ ಇಲ್ಲ, ಬಹುತೇಕ ಪೋಷಕರು ಬೇರೆ ಶಾಲೆಗಳ ಕಡೆಗೆ ಮನಸು ಮಾಡಿದ್ದಾರೆ. ಬೇರೆ ರಾಜ್ಯದಿಂದ ಹೊಟ್ಟೆಪಾಡು, ವ್ಯಾಪಾರಕ್ಕಾಗಿ ಇಲ್ಲಿಗೆ ಬಂದಿರುವ ವಲಸಿಗರ ಬಹಳಷ್ಟು ಮಕ್ಕಳು ಈ ಶಾಲೆಯಲ್ಲೇ ಕಲಿಯುತ್ತಿದ್ದಾರೆ.
ಈ ಶಾಲೆಯಲ್ಲಿ ಓದಿ ಉನ್ನತ ಸ್ಥಾನಕ್ಕೆ ಹೋಗಿರುವ ಅನೇಕರಿದ್ದು, ಅವರಲ್ಲಿ ಮುಖ್ಯವಾಗಿ ಯೋಗನರಸಿಂಹ ಎಂಬವರು ಈಗ ವೈದ್ಯರಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.ಮತ್ತೊಬ್ಬ ಹಳೆಯ ವಿದ್ಯಾರ್ಥಿ ಡಿ.ನಾಗಭೂಷಣ್ ಮೈಸೂರು ನಗರಪಾಲಿಕೆ ಸದಸ್ಯರಾಗಿದ್ದರು. ಇವರ ತಮ್ಮ, ಶಾಲೆಯಲ್ಲಿ ಓದಿರುವ ಡಿ.ಧ್ರುವಕುಮಾರ್ ಅವರು ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾಗಿದ್ದರು. ಲಕ್ಷ್ಮೀನಾರಾಯಣ್ ಎಂಬವರು ಈ ಶಾಲೆಯಲ್ಲಿ ಓದಿ ಸ್ಟೇಟ್ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ ಎಂಬುದಾಗಿ ಮುಖ್ಯ ಶಿಕ್ಷಕಿ ಸವಿತಾ ಮಾಹಿತಿ ನೀಡಿದ್ದಾರೆ.
ಕುರುಬಾರಹಳ್ಳಿ ಕ್ಲಸ್ಟರ್‌ಗೆ ಸೇರಿರುವ ಈ ಕನ್ನಡ ಶಾಲೆಯಲ್ಲಿ ಕರ್ನಾಟಕದ ಮಕ್ಕಳಿಗಿಂತ ಹೊರ ರಾಜ್ಯದವರ ಮಕ್ಕಳೇ ಹೆಚ್ಚಾಗಿದ್ದಾರೆ. ರಾಜಸ್ಥಾನದಿಂದ ಬಂದು ವ್ಯಾಪಾರ ವೃತ್ತಿಗಾಗಿ ಮೈಸೂರು ನಗರದಲ್ಲಿ ನೆಲೆಸಿರುವ ಪೋಷಕರ ೩೩ ಮಕ್ಕಳಿದ್ದು, ೩ ಮಕ್ಕಳು ಮಾತ್ರ ಸ್ಥಳೀಯರಾಗಿದ್ದಾರೆ. ಇದರಲ್ಲಿ ಒಬ್ಬ ವಿದ್ಯಾರ್ಥಿ ಪರಿಶಿಷ್ಟ ಜಾತಿ, ಇಬ್ಬರು ವಿದ್ಯಾರ್ಥಿ ಪರಿಶಿಷ್ಟ ಪಂಗಡಗಳು, ೩೪ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿರುವುದಾಗಿ ಸಹಶಿಕ್ಷಕರಾದ ಪಾರ್ವತಿ ವಿವರಿಸಿದರು.

