ಮೈಸೂರು: ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸಿ ಕೆರಳ ಮೂಲದ ಇಬ್ಬರು ದುಷ್ಕರ್ಮಿಗಳು ಮೈಸೂರಿನ ವಿದ್ಯಾರ್ಥಿಗೆ 1.80 ಕೋಟಿ ರೂ. ವಂಚಿಸಿರುವ ಘಟನೆ ನಡೆದಿದೆ.
ನಗರದ ಕುವೆಂಪುನಗರ ನಿವಾಸಿ ಪ್ರಶಾಂತ ಎಂಬವರು ದುಷ್ಕರ್ಮಿಗಳಿಂದ ವಂಚನೆಗೆ ಒಳಗಾಗಿದ್ದಾರೆ.
ಪ್ರಶಾಂತ್ ಅವರು ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೇಳೆ ಕೇರಳ ಮೂಲದ ವಿಶ್ವನಾದನ್ ಹಾಗೂ ಸ್ನೇಹ ಮರಿಯಾ ಎಂಬವರ ಪರಿಚಯವಾಗಿದೆ.
ನಾವು ವಿದ್ಯಾಭ್ಯಾಸ ಮುಗಿಸಿ ಅಮೇರಿಕಾದಲ್ಲಿ ಕೆಲಸದಲ್ಲಿ ಇದ್ದೇವೆ ಎಂದು ಪ್ರಶಾಂತ್‌ಗೆ ಹೇಳಿ,ನಿನಗೂ ವಿದೆಶದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿದ್ದಾರೆ.
ನಂತರ ಆತನನ್ನು ಬೆಂಗಳೂರು, ಹಾಂಗ್‌ಕಾಂಗ್ ಹಾಗೂ ದುಬೈಗೆ ಕರೆದೊಯ್ದಿದ್ದಾರೆ. ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಅವರು, ಪ್ರಶಾಂತ್ ಮೂಲಕವೇ ಅವರ ಪೋಷಕರನ್ನು ನಂಬಿಸಿ ಹಂತಹಂತವಾಗಿ 1.80 ಕೋಟಿ ರೂ. ಹಣವನ್ನು ಪ್ರಶಾಂತ್ ಖಾತೆಗೆ ಹಾಕಿಸಿಕೊಂಡಿದ್ದಾರೆ.
ಆ ನಂತರ ಪ್ರಶಾಂತ್‌ನನ್ನು ಬೆದರಿಸಿ ಅಷ್ಟೂ ಹಣವನ್ನು ಆತನ ಖಾತೆಯಿಂದ ತಮ್ಮ ಖಾತೆಗೆ ವಗಾಯಿಸಿಕೊಂಡಿದ್ದಾರೆ.
ಇಷ್ಟೆಲ್ಲಾ ಆದರೂ ಕೆಲಸವೂ ಸಿಗಲಿಲ್ಲ,ಏನೂ ಇಲ್ಲ.ತಾನು ಮೋಸ ಹೋಗಿರುವುದು ಗೊತ್ತಾಗಿ ಸ್ನೇಹಿತರು ಹಾಗೂ ಸಂಬಂದಿಗಳ ಸಹಾಯದಿಂದ ಪ್ರಶಾಂತ್ ದುಬೈನಿಂದ ವಾಪಸ್ಸಾಗಿದ್ದು,ಈಗ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

