ಮೈಸೂರು: ಮೈಸೂರು ನಗರದಲ್ಲಿ ಅಕ್ರಮ ಮಾದಕ ವಸ್ತು ಮಾರಾಟ ಮತ್ತು ಸಾಗಾಟದ ಮೇಲೆ ಸಿಸಿಬಿ ಮತ್ತು ಮಂಡಿ ಠಾಣಾ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಮೈಸೂರು ನಗರದ ಮಂಡಿ ಪೊಲೀಸ್ ಠಾಣೆ ಹಾಗೂ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ರಮ ಮಾದಕ ವಸ್ತು ಮಾರಾಟ ಮತ್ತು ಸಾಗಾಟದ ಮೇಲೆ ಕಾರ್ಯಾಚರಣೆ ನಡೆಸಿ ಮಂಡಿ ಠಾಣಾ ಪೊಲೀಸರು 3.14 ಗ್ರಾಂ ಎಂ.ಡಿ.ಎಂ.ಎ ವಶಪಡಿಸಿಕೊಂಡಿದ್ದಾರೆ.
ಮಂಡಿಮೊಹಲ್ಲಾ ವಾಸಿ ಮೊಹಮ್ಮದ್ ಕರೀಂ @ ಕಾಲು(29),ಕಲ್ಯಾಣಗಿರಿಯ ನಿಷಾದ್‌ಪಾಷ (36) ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೊಹಮ್ಮದ್ ಕರೀಂ ಮೇಲೆ ಈಗಾಗಲೇ ಮಂಡಿ ಠಾಣೆ, ಎನ್.ಆರ್ ಪೊಲೀಸ್ ಠಾಣೆ ಹಾಗೂ ಸೆನ್ ಪೊಲೀಸ್ ಠಾಣೆಯಲ್ಲಿ ಒಟ್ಟು 5 ಎನ್.ಡಿ.ಪಿ.ಎಸ್ ಪ್ರಕರಣಗಳು ದಾಖಲಾಗಿವೆ.
ನಿಷಾದ್‌ಪಾಷನ ಮೇಲೆ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ 3 ಕಳ್ಳತನ, ಸುಲಿಗೆ ಪ್ರಕರಣಗಳು ಹಾಗೂ ನಜರಬಾದ್ ಪೊಲೀಸ್ ಠಾಣೆ ಮತ್ತು ಉದಯಗಿರಿ ಪೊಲೀಸ್ ಠಾಣೆಯಲ್ಲಿ 2 ಎನ್.ಡಿ.ಪಿ.ಎಸ್ ಪ್ರಕರಣಗಳು ಸೇರಿದಂತೆ ಒಟ್ಟು 5 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಅಲ್ಲದೇ ಸಿಸಿಬಿ ಪೊಲೀಸರು ಮಂಡಿ ಹಾಗೂ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಪ್ರತ್ಯೇಕ ಪ್ರಕರಣಗಳಲ್ಲಿ 35 ಗ್ರಾಂ ಮತ್ತು 550 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬಂಬೂಬಜಾರ್ ವಾಸಿ
ಆರೋಪಿಗಳಾದ ಸಂಜಯ್ (31),
ನ್ಯೂ ಬಂಬೂಬಜಾರ್ ನಿವಾಸಿ
ರಾಜ್‌ಕುಮಾರ್@ ಪುಟ್ಟ (30) ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವ ಉದ್ದೇಶಕ್ಕಾಗಿ ಸಾಗಾಟ ಮಾಡಲು ಉಪಯೋಗಿಸುತ್ತಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ರಾಜೀವ್‌ನಗರ ವಾಸಿ ಮೊಹಮ್ಮದ್ ಅಫಾಕ್ (23) ಎಂಬಾತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೈಸೂರು ನಗರ ಪೊಲೀಸ್ ವತಿಯಿಂದ ನೂತನವಾಗಿ ಸ್ಥಾಪಿಸಲಾಗಿರುವ ವಿಮುಕ್ತಿ ಸಹಾಯವಾಣಿ ಸಂಖ್ಯೆ 8277948080 ಗೆ ಮಾದಕ ವಸ್ತು ಮಾರಾಟ, ಸಾಗಾಟ ಹಾಗೂ ಸೇವನೆಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಕರು ಹಂಚಿಕೊಂಡು ಮೈಸೂರು ನಗರವನ್ನು ಮಾದಕವಸ್ತು ಮುಕ್ತ ನಗರವನ್ನಾಗಿಸಲು ಪೊಲೀಸರೊಂದಿಗೆ ಕೈ ಜೋಡಿಸಬೇಕೆಂದು ಕೋರಲಾಗಿದೆ.

