ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದ ಹೆಣ್ಣು ಜೀಬ್ರಾ ‘ಪ್ರಾಚಿ’ ಅನಾರೋಗ್ಯದಿಂದ ಮೃತಪಟ್ಟಿದೆ.
ಪ್ರಾಚಿಗೆ 10 ವರ್ಷ ವಯಸ್ಸಾಗಿತ್ತು.ಇದನ್ನು 2018ರ ಸೆ.4ರಂದು ಇಸ್ರೇಲ್‌ನ ರಾಮತ್ ಗ್ಯಾನ್ ನ ಮೃಗಾಲಯದಿಂದ ಪಡೆಯಲಾಗಿತ್ತು.
ಪ್ರಾಚಿ ಮೃಗಾಲಯಕ್ಕೆ ತಂದ ನಂತರ ಐದು ಮರಿಗಳಿಗೆ ಜನ್ಮ ನೀಡಿತ್ತು. ಮೃಗಾಲಯಕ್ಕೆ ಬರುವ ಪ್ರವಾಸಿಗರು ಹಾಗೂ ಸಂದರ್ಶಕರನ್ನು ಆಕರ್ಷಿಸುತ್ತಿತ್ತು.
ಈ ಬಾರಿ ಗರ್ಭ ಧರಿಸಿದ್ದಾಗ ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಅದು ಬಳಲುತ್ತಿತ್ತು.
ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ, ಹೆಣ್ಣು ಮರಿಗೆ ಜನ್ಮ ನೀಡಿದ ಎರಡು ದಿನಗಳ ನಂತರ ಪ್ರಾಚಿ ಮೃತಪಟ್ಟಿದೆ.
ಮರಿಯನ್ನು ಸಿಬ್ಬಂದಿ ಆರೈಕೆ ಮಾಡುತ್ತಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ ತಿಳಿಸಿದ್ದಾರೆ.

