ಮೈಸೂರು: ದ್ವಿತೀಯ ಪಿಯುಸಿ ವಿಧ್ಯಾರ್ಥಿನಿ ಭವಿಷ್ಯವನ್ನೇ ಹಾಳುಮಾಡಲು ಸಂಚು ಮಾಡಿ ದಾಂಧಲೆ ನಡೆಸಿರುವ ಪ್ರಕರಣ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.
ಮುಂದೆ ಓದಿದರೆ ನಿನ್ನ ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿ ಹಲ್ಲೆ ನಡೆಸಿರುವ ಘಟನೆ ನಂಜನಗೂಡಿನ ಪಾಳ್ಯಾ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ದ್ವಿತೀಯ ಪಿಯು ವಿಧ್ಯಾರ್ಥಿನಿ ಪೂರ್ಣಿಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ಸಂಬಂಧ ಪಕ್ಕದ ಮನೆಯ ಸ್ವಾಮಣ್ಣ ಸೇರಿದಂತೆ 7 ಮಂದಿ ವಿರುದ್ದ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡ ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗಿದ ಪೂರ್ಣಿಮಾ ಕ್ರಾಸ್ ಚೆಕ್ ಮಾಡುತ್ತಿದ್ದಾಗ ಏಕಾಏಕಿ ದೊಣ್ಣೆಗಳನ್ನ ಹಿಡಿದು ನುಗ್ಗಿದ ಸೋಮಣ್ಣ ಹಾಗೂ ಇತರರು ಹಳೆ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮುಂದೆ ಓದಬಾರದು ಎಂದು ತಾಕೀತು ಮಾಡಿ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ.
ನೆರವಿಗೆ ಬಂದ ಕುಟುಂಬಸ್ಥರ ಮೇಲೂ ಹಲ್ಲೆ ಮಾಡಿ,ಮನೆಯ ಕಿಟಕಿ ಗಾಜು ಪುಡಿಪುಡಿ ಮಾಡಿದ್ದಾರೆ.
ಚೆನ್ನಾಗಿ ಓದಬಾರದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಹಲ್ಲೆ ನಡೆಸಿದರೆಂದು ಪೂರ್ಣಿಮಾ ಆರೋಪಿಸಿದ್ದಾರೆ.
ಸ್ವಾಮಣ್ಣ ಸೇರಿದಂತೆ 7 ಮಂದಿ ವಿರುದ್ದ ನಂಜನಗೂಡು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಿಸಿದ್ದಾರೆ.

