ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನೋದ್ಯಮಕ್ಕೆ ಉತ್ತೇಜನ- ಹೆಚ್.ಡಿ.ಕೆ

ಬೆಂಗಳೂರು: ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿ ಹಾಗೂ ಅದಕ್ಕೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು,
ಸಭೆ ನಡೆಸಿದರು.

ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ (ಎಫ್ ಕೆ ಸಿಸಿಐ) ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಜತೆ ಹೆಚ್ ಡಿ ಕೆ ಮಹತ್ವದ ಸಭೆ ನಡೆಸಿದರು.

ಈ ಸಭೆಯಲ್ಲಿ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ವಿಸ್ತರಣೆಗೆ ಇರುವ ವಿಪುಲ ಅವಕಾಶಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.

ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ 500 ಕೋಟಿ ವೆಚ್ಚದಲ್ಲಿ ಜಾಗತಿಕ ಮಟ್ಟದ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಈ ಸಂಬಂಧ ರಾಜ್ಯ ಸರ್ಕಾರಕ್ಕೆ, ಅದರಲ್ಲಿಯೂ ಮುಖ್ಯಮಂತ್ರಿಗಳಿಗೆ ಸ್ವತಃ ನಾನೇ ಪತ್ರ ಬರೆದಿದ್ದೇನೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಈ ತರಬೇತಿ ಕೇಂದ್ರಕ್ಕೆ ಕಳೆದ ಬಜೆಟ್ ನಲ್ಲಿ 500 ಕೋಟಿ ಮೀಸಲಿಡಲಾಗಿದೆ. ಅಗತ್ಯಬಿದ್ದರೆ ಇನ್ನೂ 500 ಕೋಟಿ ಹೂಡಿಕೆ ಮಾಡಲು ಕೇಂದ್ರ ತಯಾರಿದೆ ಎಂದು ಕುಮಾರಸ್ವಾಮಿ ಸಭೆಗೆ ತಿಳಿಸಿದರು.

ಈ ಬಗ್ಗೆ ಸಚಿವರನ್ನು ಅಭಿನಂದಿಸಿದ ಕೈಗಾರಿಕೋದ್ಯಮಿಗಳು, ಇಂತಹ ಕೇಂದ್ರವೊಂದು ರಾಜ್ಯಕ್ಕೆ ಅಗತ್ಯವಿದ್ದು, ವಾಹನೋದ್ಯಮಕ್ಕೆ ದೊಡ್ಡ ಶಕ್ತಿ ನೀಡಲಿದೆ. ಮುಖ್ಯವಾಗಿ ಇವಿ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಬೂಸ್ಟ್ ನೀಡಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಸಂಶೋಧನೆ, ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಸಾರಿಗೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸಿ ಪರಿಸರ ಪೂರಕ ಸಾರಿಗೆ ವ್ಯವಸ್ಥೆ ರೂಪಿಸುವ ದೃಢ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿದ್ದಾರೆ. ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.

ಕಂಪನಿಗಳು ಕರ್ನಾಟಕದಲ್ಲಿ ಹುಟ್ಟಿಕೊಳ್ಳುತ್ತಿವೆ, ಆದರೆ ಬೇರೆ ರಾಜ್ಯಗಳಲ್ಲಿ ಉತ್ಪಾದನೆ ಮಾಡುತ್ತಿವೆ. ಇಂತಹ ಪರಿಸ್ಥಿತಿಯಿಂದ ಕರ್ನಾಟಕವನ್ನು ಹೊರತರಬೇಕಿದೆ. ಅದಕ್ಕೆ ಎ ಆರ್ ಎಐ ಕೇಂದ್ರ ದೊಡ್ಡ ಮಟ್ಟದ ಕೊಡುಗೆ ನೀಡುತ್ತದೆ. ಆಟೋಮೊಬೈಲ್ ಪರೀಕ್ಷಾ ಕೇಂದ್ರ ಬರುವುದರ ಜತೆಗೆ ಆ ಮೂಲಕ ಸಂಶೋಧನೆ, ಉತ್ಪಾದನೆಗೂ ಮುಂದಿನ ದಿನಗಳಲ್ಲಿ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಎಂದು ಕೇಂದ್ರ ಸಚಿವರು ಹೇಳಿದರು.

ಅದೇ ರೀತಿ ಕರ್ನಾಟಕದಲ್ಲಿ ಇವಿ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿಗೂ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಅತ್ಯಾಧುನಿಕ, ಸಮಗ್ರವಾದ ಇವಿ ಪೂರಕ ವ್ಯವಸ್ಥೆ ಮಾಡುವುದರಿಂದ ರಾಜ್ಯಕ್ಕೆ ಆರ್ಥಿಕ, ಉದ್ಯೋಗ ಹಾಗೂ ಉತ್ಪಾದನೆ ಕ್ಷೇತ್ರಗಳಲ್ಲಿ ಭಾರೀ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಸಚಿವರು ತಿಳಿಸಿದರು.

ಎಫ್ ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷ ಟಿ. ಸಾಯಿರಾಂ ಪ್ರಸಾದ್, ಉಪಾಧ್ಯಕ್ಷ ಬಿ.ಪಿ. ಶಶಿಧರ್, ಗ್ರೀನ್ ಎನರ್ಜಿ ಸಮಿತಿ ಅಧ್ಯಕ್ಷ ರಮೇಶ್ ಶಿವಣ್ಣ, ಮಾಜಿ ಅಧ್ಯಕ್ಷರಾದ ಎಸ್. ಸಂಪತ್ ರಾಮನ್, ಆರ್. ಶಿವಕುಮಾರ್, ಕೆ. ಶಿವಷಣ್ಮುಗಂ, ಎಲ್. ಲಕ್ಷ್ಮಣ ಹಾಗೂ ಕೈಗಾರಿಕೋದ್ಯಮಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.