ಮೈಸೂರು: ಮೈಸೂರಲ್ಲಿ ಹಲವು ಭೂ ಕಬಳಿಕೆ ಪ್ರಕರಣಗಳು ನಡೆದಿದ್ದರೂ ತಪ್ಪಿತಸ್ಥರ ವಿರುದ್ಧ ಇದುವರೆಗೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಶ್ರೀವತ್ಸ ಅವರು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀವತ್ಸ ಅವರು,ನಗರದಲ್ಲಿ ಕೆರೆ ಒತ್ತುವರಿ, ಮೈಸೂರು-ನಂಜನಗೂಡು ರಸ್ತೆಯಲ್ಲಿ ಒತ್ತುವರಿ ಹಾಗೂ ಇದೀಗ 24 ಎಕರೆ ಅಕ್ರಮ ಈ ಮೂರು ಪ್ರಕರಣಗಳನ್ನು ನಾವು ಹೊರತಂದಿದ್ದೇವೆ ಆದರೆ ಈ ಮೂರೂ ಪ್ರಕರಣದಲ್ಲಿ ಯಾವೊಬ್ಬ ತಪ್ಪಿಸ್ತಸ್ಥರನ್ನು ಸರ್ಕಾರ ಬಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಮಾರ್ಚ್ 5ರಂದು ನಗರದಲ್ಲಿ ಸುದ್ದಿಗೋಷ್ಠಿ ಕರೆದು 24 ಎಕರೆ ಅಕ್ರಮದ ಬಗ್ಗೆ ಪ್ರಸ್ತಾಪಿಸಿದ್ದೆ,ಅದರ
ಮರುದಿನ ಅಂದರೆ 6ನೇ ತಾರೀಖು ಸೇಲ್ ಡೀಡ್ ರದ್ದಾಗಿದೆ ಇದು ಹೇಗೆ ಸಾಧ್ಯ ಎಂದು ಶ್ರೀವತ್ಸ ಪ್ರಶ್ನಿಸಿದರು.
24 ಎಕರೆ ಪ್ರದೇಶದ ಸೇಲ್ ಡೀಡ್ ಆಗುವಾಗ ಹಲವು ಮಂದಿ ಬಂದು ಸಹಿ ಹಾಕಿದ್ದಾರೆ. ಆದರೆ ಸೇಲ್ ಡೀಡ್ ರದ್ಧತಿ ವೇಳೆ ಒಬ್ಬ ವ್ಯಕ್ತಿ ಮಾತ್ರ ಸಹಿ ಹಾಕಿದ್ದಾರೆ. ಇದನ್ನು ಹೇಗೆ ಸ್ವೀಕರಿಸಿದರು,ಅಲ್ಲದೆ ನಾಲ್ಕು ಕೋಟಿ ರೂ. ಹಣವನ್ನು ಪಡೆಯಲಾಗಿದೆ ಎಂದು ಹೇಳಲಾಗಿದೆ. ನಾಲ್ಕು ಕೋಟಿ ಹಣವನ್ನು ಹೇಗೆ ನೀಡಿದ್ದಾರೆ ಎಂಬುದರ ಬಗ್ಗೆ ಪ್ರಸ್ತಾಪವಿಲ್ಲ ಹಾಗಾಗಿ ಇದರ ಬಗ್ಗೆ ನಮಗೆ ಅನುಮಾನವಿದೆ ಎಂದು ಶಾಸಕರು ಹೇಳಿದರು.
ಸೇಲ್ ಡೀಡ್ ಮಾಡುವಾಗ ಎಷ್ಟೆಷ್ಟು ಹಣವನ್ನು ಯಾವ ರೀತಿ ಪಡೆಯಲಾಗಿದೆ ಎಂದು ದಾಖಲಿಸಲಾಗಿದೆ. ಆದರೆ ಸೇಲ್ ಡೀಡ್ ರದ್ದತಿ ವೇಳೆ ನಾಲ್ಕು ಕೋಟಿ ಹಣವನ್ನು ಪಡೆಯಲಾಗಿದೆ ಎಂದು ಮಾತ್ರ ಪ್ರಸ್ತಾಪಿಸಲಾಗಿದೆ ಎಂದು ಅವರು ವಿವರಿಸಿದರು.
ಸರ್ವೇ ನಂಬರ್ 4ರಲ್ಲಿ 24 ಎಕರೆ 10 ಗುಂಟೆ ಜಮೀನನ್ನು ಪ್ರಶಾಂತ್ ಎಂ ಉಚ್ಚಿಲ್ ಅವರ ಹೆಸರಿಗೆ ರಿಜಿಸ್ಟರ್ ಮಾಡಲಾಗಿತ್ತು. ಆದರೆ ಇದು ಸರಕಾರಿ ಜಾಗ ಎಂದು ಸುದ್ದಿಗೋಷ್ಠಿಯಲ್ಲಿ ನಾನು ಹೇಳಿದ ಮರುದಿನವೇ ಈ ಸೇಲ್ ಡೀಡ್ ರದ್ದು ಮಾಡಲಾಗಿದೆ ಎಂದು ಶ್ರೀವತ್ಸ ಅವರು ತಿಳಿಸಿದರು.
ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗೆ ರಿಜಿಸ್ಟರ್ ಮಾಡಿಕೊಟ್ಟ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಸರ್ಕಾರಿ ಜಾಗವನ್ನು ರಿಜಿಸ್ಟರ್ ಮಾಡಿಕೊಂಡ ವ್ಯಕ್ತಿ ದಿಢೀರ್ ಎಂದು ಬಂದು ಸೇಲ್ ಡೀಡ್ ರದ್ದತಿ ಮಾಡಿದಾಗ ಆ ವ್ಯಕ್ತಿಯನ್ನು ಏಕೆ ಬಂಧಿಸಿಲ್ಲ? ಇದರಲ್ಲಿ ಹತ್ತು ಹಲವು ಅನುಮಾನಗಳು ಇವೆ ಎಂದು ಶ್ರೀವತ್ಸ ಹೇಳಿದರು.
ಈ ಹಿಂದೆ ಮೂಡಾ ಹಗರಣವನ್ನು ಬಯಲಿಗೆ ಎಳೆದಿದ್ದಾಗ 14 ಸೈಟ್ ಗಳನ್ನು ವಾಪಸ್ ಮಾಡಲಾಗಿತ್ತು. ಆ ಪ್ರಕರಣದಲ್ಲೂ ಯಾರ ವಿರುದ್ಧವು ಕ್ರಮ ತೆಗೆದುಕೊಂಡಿಲ್ಲ,ಈಗ ಮತ್ತೆ ಈ ಮೂರು ಪ್ರಕರಣಗಳಲ್ಲಿಯೂ ಹಾಗೆಯೇ ಆಗಿದೆ. 14 ಸೈಟ್ ಗಳನ್ನು ವಾಪಸ್ ಕೊಟ್ಟಿದ್ದು ಮಾದರಿಯೇ ಎಂದು ಶ್ರೀವತ್ಸ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ನಾಗೇಂದ್ರ, ಬಿಜೆಪಿ ಮುಖಂಡರುಗಳಾದ ಶಿವಕುಮಾರ್, ಮೋಹನ್, ಗೋಪಾಲ್ ರಾಜ ಅರಸು, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

