ಗ್ರಾಮೀಣ ಪ್ರದೇಶದ ದೇವಸ್ಥಾನಗಳ ಕಡೆಗಣನೆ-ಕೆ. ಎಸ್. ದೀಕ್ಷಿತ್ ಆರೋಪ

ಮೈಸೂರು: ಮುಜರಾಯಿ ದೇವಸ್ಥಾನಗಳ ಪೈಕಿ ಗ್ರಾಮೀಣ ಪ್ರದೇಶದಲ್ಲಿರುವ ದೇವಸ್ಥಾನಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಬೆಂಗಳೂರು ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಎಸ್. ದೀಕ್ಷಿತ್ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮುಜರಾಯಿ ದೇವಸ್ಥಾನಗಳ ಪೈಕಿ ಶೇ. 90ರಷ್ಟು ಗ್ರಾಮೀಣ ಪ್ರದೇಶಗಳಲ್ಲಿವೆ. ಗ್ರಾಮೀಣ ಪ್ರದೇಶದಲ್ಲಿರುವ ಸಿ ವರ್ಗದ ದೇವಸ್ಥಾನಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಬೇಸರ‌ ವ್ಯಕ್ತಪಡಿಸಿದರು.

ಸಿ ವರ್ಗದ ದೇವಸ್ಥಾನಗಳ ಅರ್ಚಕರಿಗೆ ತಿಂಗಳಿಗೆ 6000 ರೂ. ತಸ್ತಿಕ್ ನೀಡಲಾಗುತ್ತಿದೆ. ಇದು ಸರ್ಕಾರವೇ ನಿಗದಿಪಡಿಸಿರುವ ಕನಿಷ್ಠ ವೇತನಕ್ಕಿಂತಲೂ ಬಹಳ ಕಡಿಮೆ ಇದೆ ಎಂದು ಹೇಳಿದರು.

ಈ 6‌ ಸಾವಿರ ಹಣದಲ್ಲಿ ಅರ್ಚಕರು ತಮ್ಮ ಕುಟುಂಬ ನಿರ್ವಹಣೆ ಜೊತೆಗೆ ದೇವಸ್ಥಾನದ ಪೂಜಾ ಸಾಮಗ್ರಿಗಳನ್ನೂ ಖರೀದಿಸಬೇಕಿದೆ ಹಾಗಾಗಿ ತೊಂದರೆಯಾಗುತ್ತಿದೆ ಎಂದು ದೀಕ್ಷಿತ್ ತಿಳಿಸಿದರು.

ಸ್ವಚ್ಛತೆ, ಶೌಚಾಲಯ, ಸ್ನಾನ ಗೃಹ ಒದಗಿಸಬೇಕು. ಸಿ ವರ್ಗದ ದೇವಸ್ಥಾನಗಳ ಎಲ್ಲಾ ಅರ್ಚಕರಿಗೆ ಮತ್ತು ಪರಿಚಾರಕರಿಗೆ ಇನ್ಸೂರೆನ್ಸ್ ಸೇವಾ ಭದ್ರತೆ, ಪಿಂಚಣಿ, ಹೆಲ್ತ್ ಕಾರ್ಡ್, ವಸತಿಯನ್ನು ನೀಡಬೇಕು ತಸ್ತಿಕ್ ಹಣ 6000 ದಿಂದ 10,000 ಕ್ಕೆ ಹೆಚ್ಚಿಸಬೇಕು
ಸಿ ವರ್ಗದ ದೇವಾಲಯಗಳಿಗೆ ಉಚಿತವಾಗಿ ವಿದ್ಯುತ್ ನೀಡಬೇಕು ಎಂದು ಇದೇ ವೇಳೆ ಅವರು ಸರ್ಕಾರವನ್ನು ಆಗ್ರಹಿಸಿದರು.

ರಾಜ್ಯದಲ್ಲಿನ ದೇವಸ್ಥಾನಗಳನ್ನು ಪ್ರಾಧಿಕಾರದ ವ್ಯಾಪ್ತಿಗೆ ತರುವುದು ಬೇಡ ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾದಧಿವಂತರ ಒಕ್ಕೂಟದ ಮಂಜುನಾಥ್, ಶ್ಯಾಮಸುಂದರ ದೀಕ್ಷಿತ್, ಗೋವಿಂದರಾಜು ಹಾಗೂ ನಾಗರಾಜು ಅವರುಗಳು ಉಪಸ್ಥಿತರಿದ್ದರು.