ಮಾದಕ ವಸ್ತುಗಳಿಂದ ದೂರ ಇರಿ; ಶಿಕ್ಷಣಕ್ಕೆ ಹೆಚ್ಚು ಗಮನ ಕೊಡಿ: ಕಮೀಷನರ್

ಮೈಸೂರು: ಮಾದಕ ವಸ್ತುಗಳಿಂದ ದೂರ ಇದ್ದು, ಶಿಕ್ಷಣಕ್ಕೆ ಹೆಚ್ಚು ಗಮನ ಕೊಟ್ಟು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಓವೆಲ್ ಮೈದಾನದಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಪ್ರಿನ್ಸೆಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯ ಸೋಲು-ಗೆಲುವು ಜೀವನಕ್ಕೆ ಪಾಠವಿದ್ದಂತೆ. ಸೋಲಾಗಲಿ, ಗೆಲುವಾಗಲಿ ತಲೆಕೆಡಿಸಿಕೊಳ್ಳದೆ ಉತ್ತಮ ಮಾರ್ಗದಲ್ಲಿ ಸಾಗಬೇಕೆಂದು ತಿಳಿಹೇಳಿದರು.

ಹೆಣ್ಣು ಮಕ್ಕಳಲ್ಲಿ ಹಳ್ಳಿ ಹೆಣ್ಣುಮಕ್ಕಳು ಸಿಟಿ ಹೆಣ್ಣುಮಕ್ಕಳು ಎಂಬುದಿಲ್ಲ. ಹೆಣ್ಣು ಮಕ್ಕಳೆಂದರೆ ಸ್ಟ್ರಾಂಗ್. ಹೆಣ್ಣು ಮಕ್ಕಳು ಪ್ರಶ್ನೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕಮಿಷನರ್ ಹೇಳಿದರು.

ಕ್ರೀಡೆಗಳು ಬಲವಾದ ವ್ಯಕ್ತಿತ್ವ ಮತ್ತು ವೃತ್ತಿಜೀವನ ನಿರ್ಮಿಸಲು ಸಹಾಯ ಮಾಡುತ್ತವೆ. ಜೀವನದಲ್ಲಿ ಶಿಸ್ತನ್ನು ಬೆಳಸುವಲ್ಲಿ ಮತ್ತು ಸಕ್ರಿಯವಾಗಿರಿಸುವಲ್ಲಿ ಕ್ರೀಡೆ ಪ್ರಮುಖ ಪಾತ್ರವಹಿಸುತ್ತವೆ ಎಂದು ಸೀಮಾ ಲಾಟ್ಕರ್ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ. ಎಸ್. ಅನಿತಾ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಎಸ್.ಮೋಹನ್ ಕುಮಾರ್, ವ್ಯವಸ್ಥಾಪಕ ಕೆ.ವೆಂಕಟೇಶ್ ಮತ್ತಿತರರು ಈ ವೇಳೆ ಹಾಜರಿದ್ದರು.