ಗುಂಡ್ಲುಪೇಟೆ: ಮೊನ್ನೆಯಷ್ಟೆ ಲೋಕಾರ್ಪಣೆ ಗೊಂಡಿದ್ದ ಬರಗಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಕತರ್ನಾಕ್ ಕಳ್ಳರು ಚಿನ್ನಾಭರಣ ಮತ್ತು ದೇವರನ್ನು ದೋಚಿರುವ ಘಟನೆ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನಾದ್ಯಂತ ದೇವಸ್ಥಾನಗಳ ಕಳ್ಳತನ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದ್ದು ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನವಸತಿ ಹೆಚ್ಚಿರುವ ಗ್ರಾಮದ ಮಧ್ಯೆ ಇರುವ ದೇವಸ್ಥಾನದಲ್ಲಿಯೇ ಕಳ್ಳತನ ನಡೆಯುತ್ತಿದೆ ಹಾಗಾಗಿ ಪೊಲೀಸರು ಬಿಗಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮೊನ್ನೆ ಗುಂಡ್ಲುಪೇಟೆ ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ಸುತ್ತೂರು ಶ್ರೀಗಳಿಂದ ಹಿಡಿದು ಹತ್ತಾರು ಸ್ವಾಮೀಜಿಗಳ ಸಮ್ಮುಖದಲ್ಲಿ ಸಾವಿರಾರು ಭಕ್ತರ ನಡುವೆ ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತ್ತು.
ಎರಡೇ ದಿನಕ್ಕೆ ಅಂದರೆ ಗುರುವಾರ ಮುಂಜಾನೆ 2 ಗಂಟೆಯಿಂದ 3 ಗಂಟೆ ವೇಳೆ ಕಳ್ಳತನ ನಡೆದಿದ್ದು ತಾಯಿ ಪಾರ್ವತಿಗೆ ಧರಿಸಿದ್ದ ಚಿನ್ನಾಭರಣ ದೋಚಿದ್ದಾರೆ.
ಅಷ್ಟೇ ಅಲ್ಲಾ ಬರಗಿ ಗ್ರಾಮದ ದೇವಸ್ಥಾನದ ಒಳಗೆ ಪಾರ್ವತಾಂಬೆ ದೇವರ ಬೆಳ್ಳಿ ವಿಗ್ರಹ,
ಜತೆಗೆ ಚಿನ್ನದ ತಾಳಿ, ಎರಡು ಕಾಸು, ನಾಲ್ಕು ಗುಂಡು, ಓಲೆ ಜುಮುಕಿ, ತಾಳಿ, ಬೆಳ್ಳಿ ಬಸವ, ಬೆಳ್ಳಿ ಚಂಬು, ಬೆಳ್ಳಿ ಛತ್ರಿ ಸುರಪಾನಿ, ಇರಿಸಲಾಗಿತ್ತು. ಕಳ್ಳರು ಬಾಗಿಲ ಬೀಗದ ಚಿಲಕ ಕೂಯ್ದು,ವಿಗ್ರಹ, ಸುಮಾರು 15 ಗ್ರಾಂ ಚಿನ್ನ, 5 ರಿಂದ 6 ಕೆ.ಜಿ ಬೆಳ್ಳಿ ಕಳವು ಮಾಡಿದ್ದಾರೆಂದು ಬರಗಿ ಗ್ರಾಮಸ್ಥರು ತಿಳಿಸಿದ್ದಾರೆ.
ತಾಲ್ಲೂಕಿನ ಬನ್ನೀತಾಳಪುರ ಗ್ರಾಮ ಹಾಗೂ ಭೀಮನಭೀಡು ಗ್ರಾಮದಲ್ಲಿ ಗ್ರಾಮದ ಮಾರಿಹಬ್ಬ ಮತ್ತಿತರ ಕಾರ್ಯಕ್ರಮವಾದ ಎರಡೇ ದಿನಕ್ಕೆ ಐದಾರು ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ತಂಡವೇ ಇಲ್ಲೂ ಕಳ್ಳತನ ಮಾಡಿರಬಹುದು ಎಂದು ಗ್ರಾಮದ ಜನತೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪಟ್ಟಣ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

