ಮೈಸೂರು: ಸುಮಾರು 15 ಕ್ವಿಂಟಾಲ್ ನಷ್ಟು ಅಡಿಕೆ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಸರಗೂರು ತಾಲ್ಲೂಕಿನ ಕೆ.ಬೆಳತ್ತೂರು ಗ್ರಾಮದ ಬಿ.ಕೆ.ವಿವೇಕ್, ಮೈಸೂರಿನ ನಜರಬಾದ್ ನಿವಾಸಿ ಪ್ರಸನ್ನ.ಎಸ್ @ ರಾಮು, ರಾಘವೇಂದ್ರನಗರದ ನಿವಾಸಿ ರಾಜೇಶ ಬಂಧಿತ ಆರೋಪಿಗಳು.
ಬೆಟ್ಟದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಟ್ಟದತುಂಗಾ ಗ್ರಾಮದ ನಿವಾಸಿ ಟಿ.ಆರ್.ಶ್ರೀನಾಥ್ ರಾಜೇ ಅರಸ್ ಅವರು ಮಾರ್ಚ್ 3 ರಂದು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳುವಾಗಿದ್ದರ ಬಗ್ಗೆ ದೂರು ದಾಖಲಿಸಿದ್ದರು.
ತಮ್ಮ ತೋಟದಲ್ಲಿ ಬೆಳೆದಿದ್ದ ಅಡಿಕೆಯನ್ನು ಬೆಟ್ಟದತುಂಗ ಗ್ರಾಮದ ಗೋಡೌನ್‌ನಲ್ಲಿ ಶೇಖರಿಸಿಡಲಾಗಿತ್ತು,ಆದರೆ ಗೋಡೌನ್‌ನಲ್ಲಿ ಇಟ್ಟಿದ್ದ 15 ಕ್ವಿಂಟಾಲ್ ನಷ್ಟು ಅಡಿಕೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬೈಲಕುಪ್ಪೆ ವೃತ್ತ ನಿರೀಕ್ಷಕ ದೀಪಕ್.ಎಂ.ಕೆ., ಪಿಎಸ್ಐ ಅಜಯ್ ಕುಮಾರ್ ಅವರ ನೇತೃತ್ವದಲ್ಲಿ ಅಪರಾಧ ಪತ್ತೆ ದಳ ರಚಿಸಲಾಗಿತ್ತು.
ಈ ತಂಡವು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನ ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದರು.
ಈ ವೇಳೆ ಮೂವರು ಆರೋಪಿಗಳು ಬೆಟ್ಟದಪುರ ಪೊಲೀಸ್ ಠಾಣೆಯ ಒಂದು ಪ್ರಕರಣ, ಬೈಲಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಪ್ರಕರಣ, ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳು ಹಾಗೂ ಮೈಸೂರು ನಗರ ಪೊಲೀಸ್ ಘಟಕದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಪ್ರಕರಣ ಸೇರಿದಂತೆ ಒಟ್ಟು 6 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದುದು ಬೆಳಿಕಿಗೆ ಬಂದಿದೆ.
ಬಂಧಿತರಿಂದ 3 ಲಕ್ಷ ಬೆಲೆಯ ಟಾಟಾ ಏಸ್ ಗೂಡ್ಸ್ ವಾಹನ. ಈ ವಾಹನದಲ್ಲಿದ್ದ ಸುಮಾರು 3 ಲಕ್ಷ ಬೆಲೆ ಬಾಳುವ 3 ಚೀಲ ಬಟ್ಟೆಗಳು, ಒಟ್ಟು 8 ಲಕ್ಷ ಬೆಲೆ ಬಾಳುವ ಅಡಿಕೆ ಹಾಗೂ 2 ಲಕ್ಷ ರೂಪಾಯಿ ನಗದು ಒಟ್ಟು 16 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

