ಬೆಂಗಳೂರು: ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಆಂತರಿಕ ಭಿನ್ನಮತ ಮತ್ತು ಅಧಿಕಾರ ಹಂಚಿಕೆ ಕಿತ್ತಾಟವನ್ನು ಟೀಕಿಸಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಭಾನಯವಾರ ಬೆಂಗಳೂರಿಗೆ ಆಗಮಿಸಿದ ಮೋದಿ ಅವರು ಹೆಚ್‌ಎಎಲ್ ಆವರಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು ಕುರ್ಚಿಯಲ್ಲಿ ಎಷ್ಟು ದಿನ ಇರುತ್ತಾರೋ ಯಾರಿಗೂ ಗೊತ್ತಿಲ್ಲ. ಅಧಿಕಾರ ಹಂಚಿಕೆಯ ಕಿತ್ತಾಟದಿಂದಾಗಿ ಜನಸಾಮಾನ್ಯರ ಸಮಸ್ಯೆಗಳು ಮೂಲೆಗುಂಪಾಗಿವೆ ಎಂದು ಟೀಕಿಸಿದರು.
ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರಕ್ಕೆ ಬರುತ್ತದೆಯೋ ಅಲ್ಲೆಲ್ಲಾ ಗುಂಪುಗಾರಿಕೆ ಮತ್ತು ಆಂತರಿಕ ಜಗಳ ಸಾಮಾನ್ಯವಾಗಿಬಿಟ್ಟಿದೆ.
ಈ ಹಿಂದೆ ರಾಜಸ್ಥಾನದಲ್ಲಿ ನಡೆದ ಅಧಿಕಾರಕ್ಕಾಗಿ ಕಚ್ಚಾಟವನ್ನು ನೆನಪಿಸಿದ ಮೋದಿ, ಕರ್ನಾಟಕದಲ್ಲೂ ಈಗ ಅದೇ ಹಾದಿ ಮುಂದುವರಿಯುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸರ್ಕಾರದ ನಾಯಕರು ಕುರ್ಚಿ ಉಳಿಸಿಕೊಳ್ಳುವ ಮತ್ತು ಇನ್ನೊಬ್ಬರನ್ನು ಕೆಳಗಿಳಿಸುವ ಕದನದಲ್ಲಿ ಮುಳುಗಿದ್ದಾರೆ. ಈ ನಡುವೆ ರಾಜ್ಯದ ಖಜಾನೆ ಲೂಟಿಯಾಗುತ್ತಿದೆ, ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಆರೋಪಿಸಿದರು.
ಮುಂದಿನ ಬಾರಿ ಮತ್ತೊಬ್ಬರಿಗೆ ಅವಕಾಶ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಕಾಲ ಕಳೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿಎಂ,ಡಿಸಿಎಂ ಬಗ್ಗೆ ಟೀಕಿಸಿದ ಪ್ರಧಾನಿ ಮೋದಿ,ಇಂತಹ ಪರಿಸ್ಥಿತಿಯಲ್ಲಿ ಜನರ ಕಲ್ಯಾಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

