ನವದೆಹಲಿ: ದೇಶಾದ್ಯಂತ ಪ್ರತಿ ಲೀಟರ್ ಗೆ ಪೆಟ್ರೋಲ್,ಡಿಸೇಲ್ ಬೆಲೆ 3 ರೂ ಏರಿಕೆಯಾಗಿದ್ದು ಜನರ ಕೈ ಸುಡಲಿದೆ.
ತೈಲ ಮಾರಾಟ ಕಂಪನಿಗಳು ಜಾಗತಿಕ ಮಾರುಕಟ್ಟೆಯ ಇಂಧನ ದರ ಏರಿಕೆಗೆ ಅನುಗುಣವಾಗಿ ದರವನ್ನು ಏರಿಕೆ ಮಾಡಿ ಜನತೆಗೆ ಶಾಕ್ ನೀಡಿವೆ.
ಪರಿಷ್ಕೃತ ದರ ಬೆಳಿಗ್ಗೆಯಿಂದಲೇ ಜಾರಿಗೆ ಬಂದಿದೆ. ದರ ಏರಿಕೆಯಿಂದ ಬೆಂಗಳೂರಿನಲ್ಲಿ ಪ್ರತಿ ಲೀಟರ್ ದರ 106.17 ರೂ. ಏರಿಕೆಯಾದರೆ ಡಿಸೇಲ್ ದರ 94.10 ರೂ. ತಲುಪಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಸತತ ಏರಿಳಿತವಾಗುತ್ತಿದೆ. ಪಶ್ಚಿಮ ಏಷ್ಯಾ ಹಾಗೂ ಇರಾನ್ ಸಂಘರ್ಷದಿಂದಾಗಿ ತೈಲ ಸಾಗಣೆಯ ಜಲಮಾರ್ಗಗಳಲ್ಲಿ ವ್ಯತ್ಯಯ ಉಂಟಾಗಿದೆ. ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿದಿರುವುದರಿಂದ ಆಮದು ವೆಚ್ಚ ಹೆಚ್ಚಾದ ಕಾರಣ ದರ ಏರಿಕೆ ಮಾಡಲಾಗಿದೆ.
ಟೆಂಪೋ ಮತ್ತು ಟ್ರಕ್‌ಗಳು ಡೀಸೆಲ್ ಬಳಸುವುದರಿಂದ ಸರಕು ಸಾಗಣೆ ದರಗಳು ದುಬಾರಿಯಾಗಲಿವೆ. ಸಾಗಣೆ ವೆಚ್ಚ ಹೆಚ್ಚಾಗುವುದರಿಂದ ಮಾರುಕಟ್ಟೆಗೆ ಬರುವ ತರಕಾರಿ, ಹಣ್ಣು, ಧಾನ್ಯಗಳು ಮತ್ತು ಹಾಲಿನ ಬೆಲೆ ಹೆಚ್ಚಾಗಲಿವೆ. ಖಾಸಗಿ ಬಸ್ಸುಗಳು, ಆಟೋ ಮತ್ತು ಟ್ಯಾಕ್ಸಿಗಳ ಪ್ರಯಾಣ ದರವೂ ಏರಿಕೆಯಾಗಲಿದೆ.
ಮಾರ್ಚ್ 2024 ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 2 ರಷ್ಟು ಕಡಿತಗೊಳಿಸಲಾಗಿತ್ತು.
ಮೇ 2022 ಅಬಕಾರಿ ಸುಂಕ ಕಡಿತವಾಗಿದ್ದರಿಂದ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 8 ರೂ. ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 6 ರೂ.ರಷ್ಟು ಇಳಿಕೆಯಾಗಿತ್ತು. ಕೇಂದ್ರದ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ವ್ಯಾಟ್ ಕಡಿಮೆ ಮಾಡಿದ್ದರಿಂದ, ಗ್ರಾಹಕರಿಗೆ ಒಟ್ಟಾರೆಯಾಗಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಸುಮಾರು 9.5 ರೂ. ಮತ್ತು ಡೀಸೆಲ್ ಮೇಲೆ 7 ರೂ. ನಷ್ಟು ದರ ಇಳಿಕೆಯ ಲಾಭ ಸಿಕ್ಕಿತ್ತು.
ಸಿಎನ್‌ಜಿ ದರವೂ ಏರಿಕೆ:
ಪೆಟ್ರೋಲ್, ಡೀಸೆಲ್ ದರ ಏರಿಕೆಯಾದ ಬೆನ್ನಲ್ಲೇ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್(ಸಿ ಎನ್ ಜಿ) ಬೆಲೆ ಏರಿಕೆಯಾಗಿದೆ. ಪ್ರತಿ ಕೆಜಿ ಸಿಎನ್‌ಜಿ ದರವನ್ನು 2 ರೂ. ಏರಿಸಲಾಗಿದೆ.
ಪರಿಷ್ಕೃತ ದರ ಬೆಳಗ್ಗೆಯಿಂದಲೇ ಜಾರಿಯಾಗಿದೆ. ದರ ಏರಿಕೆಯಿಂದ ಬೆಂಗಳೂರಿನಲ್ಲಿ 1 ಕೆಜಿ ಸಿಎನ್‌ಜಿ ದರ 93 ರೂ.ಗೆ ಏರಿಕೆಯಾಗಿದೆ. ವಿವಿಧ ಭಾಗಗಳಲ್ಲಿ ಅಥವಾ ವಿತರಕರ ಆಧಾರದ ಮೇಲೆ ಬೆಲೆಯಲ್ಲಿ 30 ಪೈಸೆಯಿಂದ 1 ರೂ. ರವರೆಗೆ ವ್ಯತ್ಯಾಸ ಇರಲಿದೆ.
ಆಟೋರಿಕ್ಷಾಗಳು, ಕ್ಯಾಬ್‌ಗಳು ವೆಚ್ಚ ಕಡಿಮೆ ಮಾಡಲು ಸಿಎನ್‌ಜಿ ಬಳಸುತ್ತವೆ. ಸಣ್ಣ ಲಾರಿಗಳು, ಟೆಂಪೋಗಳು ಮತ್ತು ಡೆಲಿವರಿ ವ್ಯಾನ್‌ಗಳು ಸಿಎನ್‌ಜಿ ಇಂಧನ ಬಳಸುತ್ತವೆ. ಸಿಎನ್‌ಜಿ ದರ ಏರಿಕೆಯಿಂದ ಈ ವಾಹನಗಳ ಬಾಡಿಗೆ ಏರಿಕೆಯಾಗಲಿದೆ.
ಒಟ್ಟಾರೆ ಎಲ್ಲದರ ದರ ಏರಿಕೆಯ ಬಿಸಿ ಜನರಿಗೆ ತಟ್ಟುವುದಂತೂ ಗ್ಯಾರಂಟಿ.

