ಅಸಹಾಯಕ ವರ್ಗಕ್ಕೆ ಪಿಂಚಣಿ ನೀಡಲು ಯೋಗ್ಯತೆ ಇಲ್ಲದ ಸರ್ಕಾರ-ಅಶೋಕ

ಬೆಂಗಳೂರು: ರಾಜ್ಯದಲ್ಲಿ ಅನಾಥರು, ವೃದ್ಧರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಶೋಷಿತ, ಅಸಹಾಯಕ ವರ್ಗಗಳಿಗೆ ರಾಜ್ಯ ಸರ್ಕಾರ ನೀಡುವ ಸಹಾಯಧನ ಹಾಗೂ ಪಿಂಚಣಿ ಸ್ಥಗಿತಗೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಈ ರೀತಿ ಖಜಾನೆ ಖಾಲಿಯಾಗಿದ್ದರೂ ಸಾಧನಾ ಸಮಾವೇಶ ಮಾಡಲು ಕಾಂಗ್ರೆಸ್‌ ನಾಯಕರಿಗೆ ಯಾವ ಯೋಗ್ಯತೆ ಇದೆ ಎಂದು ಅವರು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್‌ ಸರ್ಕಾರ ತಾನು ಮಾಡಿದ ಪಾಪಗಳಿಗಾಗಿ ಸಮಾವೇಶ ನಡೆಸಿ ಸಂಭ್ರಮಾಚರಣೆ ಮಾಡುತ್ತಿದೆ. ಭಿಕ್ಷುಕರಿಗೆ, ಸಹಾಯಧನ ಪಡೆಯುವವರಿಗೆ ಆರ್ಥಿಕ ಸಹಾಯ ಸ್ಥಗಿತಗೊಳಿಸಿ, ಕಳೆದ ಮೂರು ವರ್ಷದಿಂದ ಸರ್ಕಾರ ಇವರನ್ನು ಶೋಷಣೆ ಮಾಡುತ್ತಿದೆ ಎಂದು ದೂರಿದರು.

ಗೃಹಲಕ್ಷ್ಮಿಯ 5,000 ಕೋಟಿ ರೂ., ಅನ್ನಭಾಗ್ಯದ 700 ಕೋಟಿ ರೂ. ಇನ್ನೂ ಫಲಾನುಭವಿಗಳಿಗೆ ಸಿಕ್ಕಿಲ್ಲ. ಅನಾಥ ಮಕ್ಕಳ 73 ಕೋಟಿ ರೂ. ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಪರಿಶಿಷ್ಟ ಜಾತಿಗಳ 45,000 ಕೋಟಿ ರೂ. ಲೂಟಿಯಾಗಿದೆ. ಸಮೀಕ್ಷೆಯ ಹೆಸರಲ್ಲಿ ಇನ್ನೂ ರೈತರಿಗೆ ಪರಿಹಾರ ಕೊಟ್ಟಿಲ್ಲ. ಕಂದಾಯ ಇಲಾಖೆಯಡಿಯ 12 ಬಗೆಯ ಪಿಂಚಣಿಗಳನ್ನು ಮೂರು ತಿಂಗಳಿಂದ ಕೊಟ್ಟಿಲ್ಲ, ಪ್ರತಿ ವರ್ಷ ಬಜೆಟ್‌ನಲ್ಲಿ 10,736 ಕೋಟಿ ರೂ. ಮೀಸಲಿಟ್ಟರೂ ಈ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡುವ ಸಹಾಯಧನ ಮೊದಲಾದವು ಇನ್ನೂ ನೀಡಿಲ್ಲ. ನಾನು ಸಚಿವನಾಗಿದ್ದಾಗ, ಆಸಿಡ್‌ ದಾಳಿಗೊಳಗಾದ ಹೆಣ್ಣುಮಕ್ಕಳ ನೆರವಿಗೆ ತಿಂಗಳಿಗೆ 10,000 ರೂ. ನೀಡಲು ಕ್ರಮ ವಹಿಸಿದ್ದೆ. ಅದನ್ನೂ ಈ ಸರ್ಕಾರ ನಿಯಮಿತವಾಗಿ ನೀಡುತ್ತಿಲ್ಲ, ಸಿದ್ದರಾಮಯ್ಯ ಮಾತಿಗೆ ತಪ್ಪಿದ್ದಾರೆ. ನುಡಿದಂತೆ ನಡೆಯುತ್ತೇನೆ ಎಂದು ಹೇಳಿ ಕೊಟ್ಟ ಭರವಸೆ ಮರೆತಿದ್ದಾರೆ. ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸದೆ ಪದೇ ಪದೆ ಮುಷ್ಕರ ಮಾಡುವ ಸನ್ನಿವೇಶ ನಿರ್ಮಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಟೀಕಿಸಿದರು.

ಆಯಾ ಜಿಲ್ಲೆಗಳಲ್ಲಿ ಜನಸ್ಪಂದನ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರೆ, ಜಿಲ್ಲಾ ಉಸ್ತುವಾರಿ ಸಚಿವರು ಕಮಿಶನ್‌ಗೆ ಸ್ಪಂದಿಸುತ್ತಿದ್ದಾರೆ. ಪ್ರತಿ 15 ದಿನಕ್ಕೆ ಒಮ್ಮೆ ಬೆಂಗಳೂರು ಸಿಟಿ ಪ್ರದಕ್ಷಿಣೆ ಮಾಡುತ್ತೇನೆಂದ ಸಿದ್ದರಾಮಯ್ಯ ಕೂಡ ಕಮಿಶನ್‌ ಹಿಂದೆ ಬಿದ್ದಿದ್ದಾರೆ. ನಗರದಲ್ಲಿ ಇ ಖಾತಾ ಅಭಿಯಾನ, ಬಿ ಖಾತಾದಿಂದ ಎ ಖಾತಾ ವರ್ಗಾವಣೆ ಮಾಡುತ್ತೇನೆಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿರುವುದು ಊರು ಕೊಳ್ಳೆ ಹೊಡೆದ ನಂತರ ಕೋಟೆ ಬಾಗಿಲು ಮುಚ್ಚಿದಂತಾಗಿದೆ ಎಂದು ವ್ಯಂಗ್ಯವಾಡಿದರು.

ಜನರ ಭೂಮಿ ಕಾಂಗ್ರೆಸ್‌ನ ಹಕ್ಕು ಎಂಬಂತಾಗಿದೆ. ಇದಕ್ಕೆಲ್ಲ ತಿಲಾಂಜಲಿ ನೀಡುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದರು.

ಕರ್ನಾಟಕದಲ್ಲಿ 10 ಲಕ್ಷಕ್ಕೂ ಅಧಿಕ ಬಾಂಗ್ಲಾ ಪ್ರಜೆಗಳಿದ್ದಾರೆ. ಇಲ್ಲ ಎಂದು ಯಾರಾದರೂ ಸವಾಲು ಹಾಕಿದರೆ ನಾನೇ ಅವರನ್ನು ಕರೆದುಕೊಂಡು ಹೋಗಿ ತೋರಿಸುತ್ತೇನೆ. ಇತ್ತೀಚೆಗೆ ಪೊಲೀಸ್‌ ಆಯುಕ್ತರು 65 ಲಕ್ಷ ರೂ. ಖರ್ಚು ಮಾಡಿ 250 ಬಾಂಗ್ಲಾ ದೇಶದವರನ್ನು ವಿಮಾನದಲ್ಲಿ ಕಳುಹಿಸಿ ಗಡಿವರೆಗೆ ಬಿಟ್ಟು ಬಂದಿದ್ದಾರೆ. ಮಹದೇವಪುರ, ಚಿಕ್ಕಮಗಳೂರು, ಕೊಡಗು ಕಾಫಿ ಎಸ್ಟೇಟ್‌ಗಳಲ್ಲಿ ಸಾವಿರಾರು ಬಾಂಗ್ಲಾ ದೇಶೀಯರಿದ್ದಾರೆ. ಇದಕ್ಕೆ ಎಸ್‌ಐಆರ್‌ ಅಂತ್ಯ ಹಾಡಲಿದೆ. ಗುರುತಿನ ಚೀಟಿ ಇರುವವರು ಭಯ ಪಡಬೇಕಿಲ್ಲ. ಪ್ರತಿ ಬೂತ್‌ನಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್ ಏಜೆಂಟ್ ಇರುವಾಗ ಅರ್ಹ, ನಿಜವಾದ ಮತದಾರರ ಹೆಸರು ರದ್ದಾಗಲು ಸಾಧ್ಯವೇ ಇಲ್ಲ ಎಂದು ಅಶೋಕ ಸ್ಪಷ್ಟಪಡಿಸಿದರು.

ಕಳೆದ 49 ತಿಂಗಳಿಂದ ಪ್ರಧಾನಿ ಮೋದಿ ತೈಲ ದರ ಏರಿಸಿಲ್ಲ. ಯುದ್ಧದ ವಾತಾವರಣ ಇರುವುದರಿಂದ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾಗಿದೆ. ಕಾಂಗ್ರೆಸ್‌ನ ಪ್ರಕಾರ, ಇಡೀ ಜಗತ್ತಿನಲ್ಲಿ ಭಾರತದಲ್ಲಿ ಮಾತ್ರ ತೈಲ ದರ ಏರಿಕೆಯಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರ 2024 ರಲ್ಲಿ ಪೆಟ್ರೋಲ್‌ಗೆ 3 ರೂ. ಹಾಗೂ 2025 ರಲ್ಲಿ 2 ರೂ. ಏರಿಸಿತ್ತು. ನಂದಿನಿ ಹಾಲಿಗೆ 9 ರೂ, ಆಲ್ಕೋಹಾಲ್‌ಗೆ ಶೇ.250, ವಿದ್ಯುತ್‌ಗೆ 56 ಪೈಸೆ, ನೀರಿಗೆ 3%, ಬಸ್‌ ದರ 15% ಹಾಗೂ ಮಾರ್ಗಸೂಚಿ ದರವನ್ನು ಲೆಕ್ಕವಿಲ್ಲದಂತೆ ಏರಿಸಲಾಗಿದೆ. ದೇಶ ಸಂಕಷ್ಟದಲ್ಲಿದ್ದಾಗ ಚಿನ್ನದ ಬಳೆ ನೀಡಿ ಎಂದು ಜವಹರಲಾಲ್‌ ನೆಹರೂ ಕೇಳಿದ್ದರು. ಆದರೆ ಪ್ರಧಾನಿ ಮೋದಿ ಎಂದೂ ಆ ರೀತಿ ಕೇಳದೆ ಮಿತವ್ಯಯ ಮಾಡಿ ಎಂದು ಮನವಿ ಮಾಡಿದ್ದಾರೆ ಎಂದು ಅಶೋಕ ತಿರುಗೇಟು ನೀಡಿದರು.