ಕೆಇಎ ನಡೆಸಿದ ಪರೀಕ್ಷೆಯಲ್ಲೂ ಅಕ್ರಮ-ಅಶೋಕ್ ಟೀಕೆ

ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಕೆ ಪಿ ಎಸ್ ಸಿ ಹಗರಣದ ಬಳಿಕ ಈಗ ಕೆಇಎ ನಡೆಸಿದ ಪರೀಕ್ಷೆಯಲ್ಲೂ ಅಕ್ರಮ ಕೇಳಿ ಬಂದಿದೆ ಎಂದು ಪ್ರತಿಪಕ್ಷ ನಾಯಕ ಅಶೋಕ್ ಟೀಕಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 10ರಂದು ಕೃಷಿ ವಿಜ್ಞಾನ ಕೋರ್ಸ್‌ಗಳ ಆಯ್ಕೆಗಾಗಿ ರಾಜ್ಯದ ಒಟ್ಟು 17 ಕೇಂದ್ರಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿತ್ತು. ಆದರೆ, ಚಿತ್ರದುರ್ಗದ ಹಿರಿಯೂರು ಕೇಂದ್ರವೊಂದರಲ್ಲೇ 74 ವಿದ್ಯಾರ್ಥಿಗಳಿಗೆ 200ಕ್ಕೆ 200 ಪೂರ್ಣ ಅಂಕಗಳು ಬಂದಿದೆ ಅದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಒಂದೇ ಕೇಂದ್ರದಲ್ಲಿ ಇಷ್ಟೊಂದು ವಿದ್ಯಾರ್ಥಿಗಳಿಗೆ ಔಟ್‌ ಆಪ್‌ ಔಟ್‌ ಮಾರ್ಕ್ಸ್‌ ಬಂದಿರುವುದು ಪರೀಕ್ಷಾ ಅಕ್ರಮ ನಡೆದಿರುವುದಕ್ಕೆ ಸಾಕ್ಷಿ ಎಂದು ಪೋಷಕರೇ ಆರೋಪಿಸಿದ್ದಾರೆ ಎಂಬುದಾಗಿ ಅಶೋಕ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಸಿಎಂ ಸಿದ್ದರಾನಯ್ಯ ಅವರೇ ಬಡ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಬೇಡಿ. ಕೃಷಿ ಮಂತ್ರಿ ಚೆಲುವರಾಯ ಸ್ವಾಮಿ ಅವರೇ, ಕೃಷಿ ವಿಜ್ಞಾನ ಕೋರ್ಸ್‌ಗಳ ಪ್ರಾಯೋಗಿಕ ಪರೀಕ್ಷೆಯನ್ನು (ಕೆಸಿಇಟಿ) ರದ್ದುಗೊಳಿಸಿ, ನಿಷ್ಪಕ್ಷಪಾತ ತನಿಖೆಗೆ ಆದೇಶಿಸಿ ಜೊತೆಗೆ ಮರು ಪರೀಕ್ಷೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸಿ ಎಂದು ಅಶೋಕ್ ಆಗ್ರಹಿಸಿದ್ದಾರೆ.