ಗ್ಯಾರಂಟಿ ಸರ್ಕಾರದ ಮೋಸ;ಮಾಜಿ ದೇವದಾಸಿಯರ ಬದುಕು ಬೀದಿಗೆ!

ಬೆಂಗಳೂರು: ರಾಜ್ಯದಲ್ಲಿ 26,488 ಮಾಜಿ ದೇವದಾಸಿಯರ ಬದುಕು ಸಂಕಷ್ಟಕ್ಕೆ ತಳ್ಳಲ್ಪಟ್ಟಿದೆ,ಇದು ಗ್ಯಾರಂಟಿ ಸರ್ಕಾರದ ಗ್ಯಾರಂಟಿ ಮೋಸ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

2000 ಮಾಸಾಶನವನ್ನೇ ಸರಿಯಾಗಿ ಕೊಡಲು ಆಗದ ಕಾಂಗ್ರೆಸ್ ಸರ್ಕಾರ, 5000 ನೀಡುವ ಘೋಷಣೆ ಮಾಡಿ ಜನರನ್ನು ಮೋಸಗೊಳಿಸಿದೆ ಎಂದು ಅವರು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಮನೆ ಇಲ್ಲ, ಭೂಮಿ ಇಲ್ಲ, ಆರೋಗ್ಯ ಸೌಲಭ್ಯ ಇಲ್ಲ, ಬದುಕಿಗಾಗಿ ಹೋರಾಡುತ್ತಿರುವ ಅಕ್ಕತಂಗಿಯರ ಕಣ್ಣೀರಿಗೂ ಈ ಸರ್ಕಾರ ಸ್ಪಂದಿಸುತ್ತಿಲ್ಲ.

ಬಿ.ಎಸ್.ಯಡಿಯೂರಪ್ಪ ಅವರ ದೂರದೃಷ್ಟಿಯಿಂದ ಆರಂಭವಾದ ಮಾನವೀಯ ಯೋಜನೆಯನ್ನು, ಗ್ಯಾರಂಟಿ ಹೆಸರಿನ ದಿವಾಳಿ ಆಡಳಿತ ಸಂಪೂರ್ಣ ಹಳ್ಳ ಹಿಡಿಸಿದೆ ಎಂದು ಅಶೋಕ ವ್ಯಂಗ್ಯವಾಡಿದ್ದಾರೆ.

ಪ್ರಚಾರಕ್ಕೆ ಕೋಟಿ ಕೋಟಿ ಖರ್ಚು ಮಾಡುವ ಸರ್ಕಾರಕ್ಕೆ, ಬಡ ಮಾಜಿ ದೇವದಾಸಿಯರ ಮಾಸಾಶನಕ್ಕೆ ಹಣವಿಲ್ಲವೇ? ಇದೇನಾ ನಿಮ್ಮ ಸಾಮಾಜಿಕ ನ್ಯಾಯ ಸಿದ್ದರಾಮಯ್ಯನವರೆ, ಇದೇನಾ ನಿಮ್ಮ ಮಹಿಳಾ ಪರ ಆಡಳಿತ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಶಕ್ತಿ ಯೋಜನೆ ಹೆಸರಿನಲ್ಲಿ ಪ್ರಚಾರ ಪಡೆದು, ಗೃಹಲಕ್ಷ್ಮೀ ಹೆಸರಿನಲ್ಲಿ ಮಾತು ಕೊಟ್ಟು, ಮಾಜಿ ದೇವದಾಸಿಯರ ಶಕ್ತಿ ಕುಂದಿಸಿ ಅವರ ಮನೆಗೆ ತಲುಪುತ್ತಿದ ಲಕ್ಷ್ಮಿಯನ್ನೇ ನಿಲ್ಲಿಸಿದ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಅಶೋಕ್‌ ಕಾಂಗ್ರೆಸ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.