ಚಾಮುಂಡಿ ದರ್ಶನ ಪಡೆದ ನಟ ರಣವೀರ್ ಸಿಂಗ್: ತಪ್ಪುಕಾಣಿಕೆ ಅರ್ಪಿಸಿ ಕ್ಷಮೆಯಾಚನೆ

ಮೈಸೂರು: ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಇಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ದಿಢೀರ್ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಹಿಂದೆ ದೈವದ ಬಗ್ಗೆ ಹಗುರವಾಗಿ ಮಾತನಾಡಿ ಅವಹೇಳನಕಾರಿ ವರ್ತನೆ ತೋರಿದ್ದರು ಎಂಬ ಆರೋಪ ರಣವೀರ್ ಸಿಂಗ್ ಮೇಲಿತ್ತು.ಈ‌ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.ತಪ್ಪಿಗೆ ಪ್ರಾಯಶ್ಚಿತ್ತವಾಗಿ ಇಂದು ಚಾಮುಂಡೇಶ್ವರಿ ದೇವಿಗೆ ತಪ್ಪುಕಾಣಿಕೆ ಒಪ್ಪಿಸಿ ರಣವೀರ್ ಸಿಂಗ್ ಕ್ಷಮೆಯಾಚಿಸಿದರು.

ರಣವೀರ್ ಸಿಂಗ್ ಗರ್ಭಗುಡಿಯ ಆವರಣದಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸಿದರು. ಮೂಲ ವಿಗ್ರಹ ಹಾಗೂ ಉತ್ಸವಮೂರ್ತಿ ಬಳಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.

ಯಾವುದೇ ವಿಶೇಷ ಭದ್ರತೆ ಅಥವಾ ವಿಐಪಿ ಸೌಲಭ್ಯ ಪಡೆಯದೆ, ಯಾರಿಗೂ ಮಾಹಿತಿ ನೀಡದೆ ರಣವೀರ್ ಸಿಂಗ್ ಜನಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದು ವಿಶೇಷ.