ಸಚಿವ ಸ್ಥಾನಕ್ಕೆ ಲಾಬಿ; ನಾನೂ ಆಕಾಂಕ್ಷಿ ಎಂದ ತನ್ವೀರ್ ಸೇಠ್

ಮೈಸೂರು: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಿದ್ದಂತೆ ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಶಾಸಕರು ಲಾಬಿ ಮಾಡುತ್ತಿದ್ದು, ಶಾಸಕ ತನ್ವೀರ್ ಸೇಠ್ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ನಮ್ಮ ಜಿಲ್ಲೆಯವರು ಮುಖ್ಯಮಂತ್ರಿಯಾಗಿದ್ದ ಕಾರಣ ಕಳೆದ ಬಾರಿ ಸಚಿವ ಸ್ಥಾನ ತಪ್ಪಿತ್ತು, ಈ ಬಾರಿ ಆ ರೀತಿ ಆಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಆ ಹುದ್ದೆ ನನಗೆ ಬೇಡ, ಅರ್ಹರಿಗೆ ನೀಡಲಿ, ಹಿರಿಯ ಸಚಿವರು ತ್ಯಾಗ ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುತ್ತಾರ ಎಂಬ ವರದಿಗಾರರ ಪ್ರಶ್ನೆಗೆ ಎಲ್ಲರೂ ಎಲ್ಲ ಹುದ್ದೆಗೂ ಅರ್ಹರಾಗಿದ್ದಾರೆ. ಹೊಸ ಸರ್ಕಾರದ ರಚನೆ ಜನರ ಅಭಿವೃದ್ಧಿಗೆ ಪೂರಕವಾಗಿರಲಿ. ಹಿಂದೆ ಹೈಕಮಾಂಡ್ ನಾಯಕರು ಮೌನವಾಗಿದ್ದಿದ್ದು ಸರಿಯಲ್ಲ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದಷ್ಟೆ ತನ್ವೀರ್ ಸೇಠ್ ತಿಳಿಸಿದರು.