ಮೈಸೂರು ಮೇ 29 – ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 27ನೇ ವರ್ಷದ ಬ್ರಹ್ಮೋತ್ಸವದ ಅಂಗವಾಗಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಸಪ್ತರ್ಷಿ ಸರೋವರದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಜೃಂಭಣೆಯ ತೆಪ್ಪೋತ್ಸವ ನಡೆಯಿತು.
ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಮಂಗಳವಾದ್ಯ, ವೇದಘೋಷಗಳೊಂದಿಗೆ ಸರೋವರದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಮಾಡಿಸಲಾಯಿತು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ತೆಪ್ಪೋತ್ಸವವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಆಶ್ರಮಕ್ಕೆ ಆಗಮಿಸಿದ್ದರು.
ಬ್ರಹ್ಮೋತ್ಸವದ ಪ್ರಯುಕ್ತ ಕ್ಷೇತ್ರದಲ್ಲಿ ವಿಶೇಷ ಪೂಜೆ, ಹೋಮ, ಹವನಗಳು ನಡೆಯುತ್ತಿದ್ದು, ಗರುಡೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

