ಮೈಸೂರು: ಕದಂಬ ಕನ್ನಡ ಕರ್ನಾಟಕ ಸೇನೆ ವತಿಯಿಂದ ಇಂದು ನಗರದ ಕೆ.ಆರ್. ವೃತ್ತದಲ್ಲಿ 1681ನೇ ಕನ್ನಡ ಸಾಮ್ರಾಜ್ಯೋತ್ಸವದ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸೇನೆಯ ರಾಜ್ಯಾಧ್ಯಕ್ಷ ಶಿವಕುಮಾರ್, ಸಂಸ್ಥಾಪಕ ಅಧ್ಯಕ್ಷ ಕದಂಬ ನಾ. ಅಂಬರೀಶ್ ಹಾಗೂ ಮೈಸೂರು ನಗರ ನೂತನ ಜಿಲ್ಲಾಧ್ಯಕ್ಷ ವಕೀಲ ಶಿವರಾಜ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬಳಿಕ ಕನ್ನಡಿಗರ ಪ್ರಪ್ರಥಮ ಸಾಮ್ರಾಜ್ಯವಾದ ಕದಂಬ ಸಾಮ್ರಾಜ್ಯ ಸ್ಥಾಪಕ ಮಯೂರವರ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಜೈಪ್ರಕಾಶ್, ಕನ್ನಡ ಸಂಘಟನೆಯ ಮುಖಂಡ ಮೂಗೂರು ನಂಜುಂಡಸ್ವಾಮಿ, ಮಾಜಿ ಸಿಂಡಿಕೇಟ್ ಸದಸ್ಯ ಸುರೇಶ್ ಗೌಡ, ಕೆಜೆಪಿ ರಾಜ್ಯಾಧ್ಯಕ್ಷ ಪ್ರವೀಣ್ ಭಾರದ್ವಾಜ್ ಭಾಗವಹಿಸಿ ಮಯೂರವರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಸೇನೆಯ ರಾಜ್ಯ ಮುಖಂಡರಾದ ಭಗವಾನ್, ಮಂಡ್ಯ ಇಂಡವಾಳು ಸೋಮಶೇಖರ್, ಚಿಕ್ಕ ವೆಂಕಟಪ್ಪ, ಎಸ್. ವೆಂಕಟೇಶ್, ನಂಜನಗೂಡು ಅಧ್ಯಕ್ಷ ಬಸವಣ್ಣ, ಸುರೇಶ್ ಗೋಲ್ಡ್, ಮೈಸೂರಿನ ವಿಜಯಕುಮಾರ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

