ಮೈಸೂರು: ದಸರಾ ಜಲಸಾಹಸ ಕ್ರೀಡೆಗಳ ಜೊತೆಗೆ ವರ್ಷವಿಡೀ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ವರುಣ ಕೆರೆಗೆ ಹೊಸ ರೂಪ ನೀಡಲಾಗುತ್ತಿದೆ.
14.75 ಕೋಟಿ ರೂ. ಅನುದಾನದಲ್ಲಿ ಕೆರೆಯ ಸಮಗ್ರ ಅಭಿವೃದ್ಧಿ ಹಾಗೂ ಸೌಂದರ್ಯೀಕರಣ ಕಾಮಗಾರಿ ಆರಂಭವಾಗಿದ್ದು, ವರುಣ ನಾಲೆಯಿಂದ ಶುದ್ಧ ನೀರನ್ನು ಕೆರೆಗೆ ಹರಿಸಲಾಗುತ್ತಿದೆ.
ಚಿಕ್ಕಹಳ್ಳಿ, ವಾಜಮಂಗಲ ಗ್ರಾ.ಪಂ ಮತ್ತು ಎಂಡಿಎ ಬಡಾವಣೆಗಳ ಕೊಳಚೆ ನೀರು ಡಿ.ದೇವರಾಜ ಅರಸು ಮುಖ್ಯ ನಾಲೆಯ ಹಳ್ಳದ ಮೂಲಕ ಕೊಳಕು ವರುಣ ಕೆರೆ ಸೇರುತ್ತಿತ್ತು. ಇದರಿಂದ ಕೆರೆಯ ನೀರು ‘ಡಿ’ ದರ್ಜೆಗೆ ಕುಸಿದಿತ್ತು.
ಕಲುಷಿತ ನೀರಿನ ದುರ್ವಾಸನೆಯಿಂದ ದೋಣಿ ವಿಹಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆರೆ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿದ್ದಾರೆ.
ಭವಿಷ್ಯದಲ್ಲಿ ಮಲೀನ ನೀರು ಕೆರೆ ಸೇರದಂತೆ ತಡೆಯಲು ಕಾವೇರಿ ನೀರಾವರಿ ನಿಗಮ ‘ನೈಸರ್ಗಿಕ ಜೈವಿಕ ವ್ಯವಸ್ಥೆ’ (ಎನ್‌ಬಿಎಸ್) ತಂತ್ರಜ್ಞಾನ ಬಳಸುತ್ತಿದೆ. ಎಸ್‌ಬಿಆರ್ ತಂತ್ರಜ್ಞಾನಕ್ಕೆ ಹೆಚ್ಚಿನ ಜಾಗ, ವಿದ್ಯುತ್ ಮತ್ತು ನಿರಂತರ ನಿರ್ವಹಣೆ ಬೇಕಾಗುವುದರಿಂದ ಅದನ್ನು ಕೈಬಿಡಲಾಗಿದೆ.
ಎನ್‌ಬಿಎಸ್ ವ್ಯವಸ್ಥೆಯಲ್ಲಿ ಕೆರೆಯ ಸುತ್ತ ಪ್ರತ್ಯೇಕ ನಾಲೆ ಏರಿ ನಿರ್ಮಿಸಿ, ಮಲಿನ ನೀರು ಕೆರೆಗೆ ಸೇರದಂತೆ ಕೋಡಿ ಮೂಲಕ ಹೊರಗೆ ಹರಿಸಲಾಗುತ್ತದೆ. ನಾಲೆಯ ಉದ್ದಕ್ಕೂ ‘ಕ್ಯಾನ್ನಾ ಇಂಡಿಕಾ’ ಮತ್ತು ‘ವೆಡೆಲಿಯಾ’ ಸಸ್ಯಗಳನ್ನು ಬೆಳೆಸಿ, ಅವುಗಳ ಮೂಲಕ ನೈಸರ್ಗಿಕವಾಗಿ ಸಲ್ಫರ್, ನೈಟ್ರೋಜನ್‌ನಂತಹ ರಾಸಾಯನಿಕಗಳನ್ನು ಹೀರಿಕೊಂಡು ನೀರನ್ನು ಶುದ್ಧೀಕರಿಸಲಾಗುತ್ತದೆ.
ಚಾಮುಂಡಿಬೆಟ್ಟದ ತಪ್ಪಲಿನಿಂದ ಬರುತ್ತಿದ್ದ ನೈಸರ್ಗಿಕ ಜಲಮೂಲ ಕಣ್ಮರೆಯಾಗಿದ್ದರಿಂದ, ಚಿಕ್ಕಹಳ್ಳಿಯ ವರಕೋಡು ಬಳಿ ವರುಣ ನಾಲೆಯಿಂದ ಕೆರೆಗೆ ನೀರು ಹರಿಸಲಾಗುತ್ತಿದೆ. ಇದರಿಂದ ಮೈಸೂರು-ತಿ.ನರಸೀಪುರ ರಸ್ತೆಯಲ್ಲಿರುವ ವರುಣ ಕೆರೆ ಆಕರ್ಷಕ ಪ್ರವಾಸಿ ತಾಣವಾಗಿ ಬದಲಾಗಲಿದೆ.
ಕೆರೆ ಅಭಿವೃದ್ಧಿ ಯೋಜನೆಯಲ್ಲಿ ಕೆಫೆಟೇರಿಯಾ, ಉದ್ಯಾನವನ, ವಾಯುವಿಹಾರಕ್ಕೆ ವಾಕ್ ವೇ, ಸ್ವಾಗತ ಕಮಾನು ನಿರ್ಮಾಣ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲಾಗುತ್ತದೆ. ಮುಖ್ಯರಸ್ತೆಯಿಂದಲೇ ಕೆರೆಯ ಸೌಂದರ್ಯ ಸವಿಯಲು ವಿಶೇಷ ವ್ಯೂ ಪಾಯಿಂಟ್ ಕೂಡ ನಿರ್ಮಾಣವಾಗಲಿದ್ದು ಮೈಸೂರಿಗರಿಗೆ ಹಾಗೂ ಪ್ರವಾಸಿಗರಿಗೆ ಖುಷಿಯ ವಿಚಾರವಾಗಿದೆ.

