ಮೈಸೂರು ಪೊಲೀಸರಿಂದ 2.09 ಕೋಟಿ ಮೌಲ್ಯದ 1ಕೆ.ಜಿ. 578 ಗ್ರಾಂ ಆಭರಣ ವಶ

ಮೈಸೂರು‌‌: ಮೈಸೂರು ನಗರ ಪೊಲೀಸ್ ಘಟಕವು ಕಳೆದ 3 ತಿಂಗಳಲ್ಲಿ 2,09,37,645 ರೂ ಮೌಲ್ಯದ 1 ಕೆ.ಜಿ 578 ಗ್ರಾಂ.743 ಮಿಲಿ ಚಿನ್ನಾಭರಣ ವಶಪಡಿಸಿಕೊಂಡು 55 ಆರೋಪಿಗಳನ್ನು ಬಂಧಿಸಿದೆ ಎಂದು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

1-ದರೋಡೆ ಸಂಚು, 2- ಸುಲಿಗೆ,10-ಕನ್ನ ಕಳುವು, 9-ಮನೆ ಕಳ್ಳತನ, 4-ಮನೆ ಕೆಲಸದವರಿಂದ ಕಳ್ಳತನ, 10-ವಾಹನ ಕಳ್ಳತನ,5-ಸಾಮಾನ್ಯ ಕಳ್ಳತನ, ಹಾಗೂ 3-ವಂಚನೆ ಪ್ರಕರಣ ಸೇರಿದಂತೆ ಒಟ್ಟು 44 ಪ್ರಕರಣಗಳನ್ನು ಪತ್ತೆ ಮಾಡಿ 2,09,37,645‌ ರೂ ಮೌಲ್ಯದ 1 ಕೆ.ಜಿ 578 ಗ್ರಾಂ. 743 ಮಿಲಿ ಚಿನ್ನಾಭರಣ, 3 ಕೆ.ಜಿ 578 ಗ್ರಾಂ ಬೆಳ್ಳಿ ಪದಾರ್ಥ,10 ವಾಹನಗಳು ಮತ್ತು 2,76,786 ರೂ ನಗದು ಹಾಗೂ ಇತರೇ ಮಾಲುಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಡಿ ಠಾಣಾ ಪೊಲೀಸರು ಇಬ್ಬರು ಆರೋಪಿಯನ್ನು ಬಂಧಿಸಿ, 90 ಲಕ್ಷ ಮೌಲ್ಯದ ಒಟ್ಟು 660 ಗ್ರಾಂ ಚಿನ್ನದ ಗಟ್ಟಿಯನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.

ವಿಜಯನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, 2- ಮನೆ ಕೆಲಸದವರಿಂದ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ 23.50.000 ರೂ ಮೌಲ್ಯದ 170 ಗ್ರಾಂ ಚಿನ್ನಾಭರಣ ಮತ್ತು ಗಾರ್ಮೆಂಟ್ಸ್ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 3- ಕನ್ನಕಳುವು, 1- ಮನೆಕಳ್ಳತನ ಒಟ್ಟು 4 ಪ್ರಕರಣಗಳನ್ನು ಪತ್ತೆ ಮಾಡಿ 21,00,000 ರೂ ಮೌಲ್ಯದ 173 ಗ್ರಾಂ 260 ಮಿಲಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಅಲ್ಲದೆ 1- ವಂಚನೆ ಪ್ರಕರಣ ಪತ್ತೆ ಮಾಡಿ 4 ಆರೋಪಿಗಳನ್ನು ವಶಕ್ಕೆ ಪಡೆದು 2,74,000 ರೂ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಸರಸ್ವತಿಪುರಂ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, 4-ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ 18,40,000 ರೂ ಮೌಲ್ಯದ 143 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಲಷ್ಕರ್ ಠಾಣಾ ಪೊಲೀಸರು 4 ಜನ ಆರೋಪಿಗಳನ್ನು ಬಂಧಿಸಿ 3 ಸಾಮಾನ್ಯ ಕಳುವು,1-ಮನೆ ಕೆಲಸದವರಿಂದ ಕಳ್ಳತನ ಒಟ್ಟು 4 ಪ್ರಕರಣಗಳನ್ನು ಪತ್ತೆ ಮಾಡಿ 11,45000 ರೂ ಮೌಲ್ಯದ 202 ಗ್ರಾಂ ಚಿನ್ನಾಭರಣಗಳು, 196 ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಕಮಿಷನರ್ ತಿಳಿಸಿದರು.

ಇದೇ‌ ವೇಳೆ ವಾರಸುದಾರರಿಗೆ ಕಳುವಾಗಿದ್ದ ಚಿನ್ನಾಭರಣ ಹಿಂತಿರುಗಿಸಲಾಯಿತು.