ಮೈಸೂರು: ಕರ್ನಾಟಕ ವಿಧಾನ ಮಂಡಲ ಅಧೀನ ಶಾಸನ ರಚನಾ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ನಗರದ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿನ ಅವ್ಯವಸ್ಥೆ ಸರಿಪಡಿಸಲು ಹಾಗೂ ಸ್ವಚ್ಛತೆ ಕಾಪಾಡಲು ಸಮಿತಿ ಸೂಚನೆ ನೀಡಿದರು.
ಸಮಿತಿಯ ಸದಸ್ಯರು ಶ್ರೀನಿವಾಸ್ ನೇತೃತ್ವದಲ್ಲಿ ತುರ್ತುಚಿಕಿತ್ಸಾ ವಿಭಾಗ, ಹೊರರೋಗಿಗಳ ದಾಖಲಾತಿ ಕೊಠಡಿ, ಔಷಧಿ ದಾಸ್ತಾನು ಕೊಠಡಿ, ಅಡುಗೆ ಮನೆ, ಶಸ್ತ್ರಚಿಕಿತ್ಸಾ ವಿಭಾಗ ಹಾಗೂ ಮಾನಸಿಕ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಧ್ಯಕ್ಷ ಶ್ರೀನಿವಾಸ್ ಅವರು ಆಸ್ಪತ್ರೆಯ ನೋಂದಣಿ ಶುಲ್ಕ ಹೆಚ್ಚಿಸಿದರೆ ಅಗತ್ಯ ಸೌಲಭ್ಯಕ್ಕೆ ಬಳಸಿಕೊಳ್ಳಬಹುದು. ಆಸ್ಪತ್ರೆ ಆವರಣದ ರಸ್ತೆಗಳನ್ನು ದುರಸ್ತಿಪಡಿಸಬೇಕು. ಮೂಲಸೌಕರ್ಯ ಪಟ್ಟಿ ನೀಡಿದರೆ ಅನುದಾನಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಮಿತಿ ಸದಸ್ಯ ಹಾಗೂ ಎಂಎಲ್‌ಸಿ ಕೆ. ಶಿವಕುಮಾರ್ ಮಾತನಾಡಿ,ಗ್ರಾಮೀಣ ಭಾಗದಿಂದ ಬರುವ ರೋಗಿಗಳಿಗೆ ಸ್ಕ್ಯಾನಿಂಗ್, ಔಷಧಿಗೆ ಹೊರಗಡೆ ಬರೆದುಕೊಡುತ್ತಿರುವುದರಿಂದ ಆರ್ಥಿಕ ಸಂಕಷ್ಟವಾಗುತ್ತಿದೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲ ಸೌಲಭ್ಯವನ್ನೂ ರೋಗಿಗಳಿಗೆ ನೀಡಬೇಕು. ವೈದ್ಯರು ಮಾನವೀಯತೆ ದೃಷ್ಟಿಯಿಂದ ರೋಗಿಗಳನ್ನು ನೋಡಬೇಕು ಎಂದು ಕಡಕ್ ಸೂಚನೆ ನೀಡಿದರು.
ರೋಗಿಗಳು ತಪಾಸಣೆಗೆ ಪರದಾಡಬಾರದು, ಸಮರ್ಪಕ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದ ಅವರು, ಆಸ್ಪತ್ರೆಗೆ ಅಗತ್ಯವಿರುವ ಒಂದು ಅತ್ಯಾಧುನಿಕ ಆಂಬ್ಯುಲೆನ್ಸ್ ಅನ್ನು ತಮ್ಮ ಅನುದಾನದಲ್ಲಿ ಒದಗಿಸುವುದಾಗಿ ಸ್ಥಳದಲ್ಲೇ ಪ್ರಕಟಿಸಿದರು.
ಎಂಎಲ್‌ಸಿ ಶರವಣ, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸಿಗುವಂತಹ ಸೇವಾ ಸೌಲಭ್ಯ ಈ ಆಸ್ಪತ್ರೆಯಲ್ಲೂ ದೊರಕಬೇಕು, ಗುಣಮಟ್ಟದ ಚಿಕಿತ್ಸೆ ನೀಡಿ ರೋಗಿಗಳಲ್ಲಿ ಭರವಸೆ ಮೂಡಿಸಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಸಮಿತಿಯು ಮೈಸೂರಿನ ರೇಷ್ಮೆ ನೇಯ್ಗೆ ಕಾರ್ಖಾನೆಗೆ ಭೇಟಿ ನೀಡಿ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ರೇಷ್ಮೆ ಸೀರೆ ಪೂರೈಸುವಂತೆ ಸೂಚಿಸಿತು.
ಎಂಎಂಸಿ & ಆರ್‌ಐ ಡೀನ್ ಡಾ. ದಾಕ್ಷಾಯಿಣಿ, ಕೆ.ಆರ್. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಎಚ್.ಪಿ. ಶೋಭಾ ಈ ವೇಳಡ ಹಾಜರಿದ್ದರು.

