ಹಿರಿಯ ಛಾಯಾಗ್ರಾಹಕ ಪ್ರಗತಿ ಗೋಪಾಲ ಕೃಷ್ಣರಿಗೆ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ

ಮೈಸೂರು: ಕಳೆದ 45 ವರ್ಷಗಳಿಂದ ಪತ್ರಿಕಾ ಛಾಯಾಗ್ರಾಹಕರಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಮೈಸೂರಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ಪ್ರಗತಿ ಗೋಪಾಲ ಕೃಷ್ಣ ಅವರಿಗೆ ಪ್ರತಿಷ್ಠಿತ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನಲ್ಲಿ ನಾಳೆ ಜೂ.12ರಂದು ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಛಾಯಾಗ್ರಹಕ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ದೀರ್ಘಕಾಲದ ಸೇವೆ, ವೃತ್ತಿಪರ ನಿಷ್ಠೆ ಹಾಗೂ ಸಮಾಜಮುಖಿ ಛಾಯಾಚಿತ್ರಗಳ ಮೂಲಕ ಮಾಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವಕ್ಕೆ ಪ್ರಗತಿ ಗೋಪಾಲ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ.

ಮೈಸೂರಿನಲ್ಲಿ ಕಳೆದ ನಾಲ್ಕೂವರೆ ದಶಕಗಳಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಗೋಪಾಲ ಕೃಷ್ಣ ಅವರು ಅನೇಕ ಪ್ರಮುಖ ಘಟನೆಗಳು, ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಜೀವನದ ಅಪರೂಪದ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಪತ್ರಿಕೋದ್ಯಮ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

2026ರ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.

ಪ್ರಗತಿ ಗೋಪಾಲ ಕೃಷ್ಣ ಅವರಿಗೆ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಛಾಯಾಗ್ರಹಣ ಹಾಗೂ ಪತ್ರಿಕೋದ್ಯಮ ವಲಯದ ಗಣ್ಯರು, ಸ್ನೇಹಿತರು ಮತ್ತು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.