ಭಾವಚಿತ್ರಕ್ಕೆ ಅಪಮಾನ ಮಾಡಲು ಯತ್ನ: ವ್ಯಕ್ತಿಯ ಕಟ್ಟಿ ಧರ್ಮದೇಟು ಕೊಟ್ಟ ಜನ!

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಮಸಣಾಪುರ ಗ್ರಾಮದಲ್ಲಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಲು ಯತ್ನಿಸಿದ ಕಿಡಿಗೇಡಿಯನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ಟ ಘಟನೆ ನಡೆದಿದೆ.

ಮಸಣಾಪುರ ಗ್ರಾಮದ ಅನ್ಯಕೋಮಿಗೆ ಸೇರಿದ ವ್ಯಕ್ತಿಯೊಬ್ಬ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಚಾರ ಎಸಗಲು ಮುಂದಾಗಿದ್ದ ಎನ್ನಲಾಗಿದೆ.ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ವಿವಿಧೆಡೆ ಇಂತಹ ಕೃತ್ಯಗಳು ಆಗ್ಗಾಗ್ಗೆ ವರದಿಯಾಗುತ್ತಲೇ ಇದ್ದು, ಸಾರ್ವಜನಿಕರು ಜಾಗರೂಕರಾಗಿ ಪರಿಶೀಲುಸುತ್ತಲೇ ಇದ್ದರು.

ಕಿಡಿಗೇಡಿ ಯುವಕ ಕೃತ್ಯ ಎಸಗುತ್ತಿದ್ದ ವೇಳೆ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದಾನೆ.ತಕ್ಷಣ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ಆತನನ್ನು ಹಿಡಿದು, ಬಟ್ಟೆ ಬಿಚ್ಚಿಸಿ ಕಂಬಕ್ಕೆ ಕಟ್ಟಿ ಥಳಿಸಿ ಚಪ್ಪಲಿ ಹಾರ ಹಾಕಿದ್ದಾರೆ.

ಈ ಘಟನೆಯಿಂದ ಮಸಣಾಪುರ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸದ್ಯ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿಭದ್ರತೆ ಮಾಡಲಾಗಿದ್ದು, ಅಧಿಕಾರಿಗಳು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಿಕ್ಕಿಬಿದ್ದ ವ್ಯಕ್ತಿಯು ಮಾನಸಿಕ ರೋಗದ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದ್ದು ಪೊಲೀಸ್ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ.